ಬಹುನಿರೀಕ್ಷಿತ ‘ಕಾಂತಾರ’ ಪ್ರೀಕ್ವೆಲ್ ಬಿಡುಗಡೆಗೆ ಹೊಸ ಅಪ್​ಡೇಟ್​

ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕಾಂತಾರ’. ಅದ್ಭುತ ಕಥೆಯೊಂದಿಗೆ ಪ್ರತಿ ಪಾತ್ರವನ್ನೂ ಸುಂದರವಾಗಿ, ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಹಿಟ್​ ಆಗುವುದರೊಂದಿಗೆ, ಪ್ರೇಕ್ಷಕರನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಿಂದಾಗಿ ಶೆಟ್ರ ಕ್ರೇಜ್​ ಕೂಡ ಹೆಚ್ಚಾಗಿದೆ. ಸ್ಟಾರ್​ ತಾರೆಯರಿಂದ ಹಿಡಿದು ಸಾಮಾನ್ಯ ಜನರವರೆಗೂ ‘ಕಾಂತಾರ’ ತಲುಪಿದೆ.ನಟ, ನಿರ್ದೇಶಕ ರಿಷಬ್ ಶೆಟ್ಟಿ ಸ್ವಯಂ ನಿರ್ದೇಶಿಸಿ, ನಟಿಸಿ ಸೈ ಎನಿಸಿಕೊಂಡ ಸಿನಿಮಾವಿದು. ರಿಷಬ್ ಶೆಟ್ಟಿ ಸಾರಥ್ಯದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್​ ಕುರಿತು ಹೊಸ ಅಪ್​ಡೇಟ್​ ಹೊರಬಿದ್ದಿದೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಕನ್ನಡ ಮಾತ್ರವಲ್ಲದೇ ಪ್ರೇಕ್ಷಕರ ಬಹುಬೇಡಿಕೆಯ ಮೇರೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಇದೇ ಖುಷಿಯಲ್ಲಿ ಚಿತ್ರತಂಡ 100 ದಿನಗಳ ಕಾರ್ಯಕ್ರಮವನ್ನೂ ಕೂಡ ಅದ್ಧೂರಿಯಾಗಿ ಆಯೋಜನೆ ಮಾಡಿತ್ತು. ಈ ಸಮಾರಂಭದಲ್ಲಿ ಸೀಕ್ವೆಲ್​ ಬದಲಿಗೆ ಕಾಂತಾರ ಪ್ರೀಕ್ವಲ್​ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು.

ಶೂಟಿಂಗ್​ ಸ್ಥಳದಲ್ಲೂ ಬದಲಾವಣೆ: ಕಾಂತಾರ ಮೊದಲನೇ ಭಾಗದ ಬಹುತೇಕ ಚಿತ್ರೀಕರಣ ರಿಷಬ್​ ಅವರ ಹುಟ್ಟೂರು ಕುಂದಾಪುರದಲ್ಲಿ ನಡೆದಿತ್ತು. ಆದರೆ, ಎರಡನೇ ಭಾಗವು ಮಂಗಳೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಅಲ್ಲದೇ ಕಾಂತಾರವನ್ನು ಕಡಿಮೆ ಬಜೆಟ್​ನಲ್ಲಿ ನಿರ್ಮಿಸಲಾಗಿತ್ತು. ಆದರೆ, ಚಿತ್ರದ ಪ್ರೀಕ್ವೆಲ್​ಗೆ ಭಾರಿ ಬಜೆಟ್​ ಮೀಸಲಿಡಲಾಗಿದೆ. ಭೂತರಾಧನೆಯನ್ನು ಸಿನಿಮಾದಲ್ಲಿ ಇನ್ನಷ್ಟು ಆಳವಾಗಿ ತೋರಿಸಲಾಗುವುದು. ಮುಂದಿನ ವರ್ಷ 2024ರ ಕೊನೆಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುವ ಯೋಚನೆ ಚಿತ್ರತಂಡದ್ದು.

ರಿಷಬ್​ ಶೆಟ್ಟಿ ಈ ಹಿಂದೆ ಸಂದರ್ಶನವೊಂದರಲ್ಲಿ ಕಾಂತಾರ 2 ಚಿತ್ರಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ನಿಸರ್ಗದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡ ಮೊದಲ ಭಾಗದ ಕಥೆ ಎಲ್ಲಿ, ಹೇಗೆ ಆರಂಭವಾಯಿತು ಎಂದು ಕಾಂತಾರ ಪ್ರೀಕ್ವೆಲ್​ನಲ್ಲಿ ತೋರಿಸಲಾಗುವುದು ಎಂದು ತಿಳಿಸಿದ್ದರು. ಇನ್ನೂ ಚಿತ್ರದಲ್ಲಿ ಕರಾವಳಿ ಜನತೆ ಅಪಾರ ನಂಬಿಕೆ ಇಟ್ಟಿರುವ ದೈವ ಪಂಜುರ್ಲಿಗೆ ಸಂಬಂಧಿಸಿದ ದೃಶ್ಯಗಳೂ ಸಹ ಹೆಚ್ಚು ಇರಲಿವೆ ಎನ್ನಲಾಗಿದೆ. ಈ ಮಧ್ಯೆ ಚಿತ್ರಕ್ಕಾಗಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕುದುರೆ ಸವಾರಿ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.ಅದರಂತೆ ಮಾರ್ಚ್​ನಲ್ಲಿ ಕಾಂತಾರದ ಪ್ರೀಕ್ವೆಲ್​ ಕಥೆ ಕೆಲಸ ಶುರುವಾಯಿತು. ಅದರ ನಂತರ ಕೆಲವೊಂದು ಊಹಾಪೋಹಗಳು ಬಿಟ್ಟರೆ ಯಾವುದೇ ಅಧಿಕೃತ ಮಾಹಿತಿಗಳು ಸಿನಿಮಾ ವಿಚಾರವಾಗಿ ಸಿಕ್ಕಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದರು. ಇದೀಗ ಸಿನಿ ಪ್ರಿಯರಿಗೊಂದು ಗುಡ್​ನ್ಯೂಸ್​ ಸಿಕ್ಕಿದೆ. ಈ ಸಿನಿಮಾಗೆ ಸಂಬಂಧಿಸಿದ ವಿಚಾರವೊಂದು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ.