ಬಡಾ ಎರ್ಮಾಳಿನಲ್ಲಿ ಉದ್ಯೋಗ ಕಳೆದುಕೊಂಡ ಚಿಂತೆಯಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

ಸುಮಾರು 10 ತಿಂಗಳ‌ ಹಿಂದೆ ಕೆಲಸ ಕಳೆದುಕೊಂಡು ಊರಿಗೆ ಬಂದಿದ್ದ ವ್ಯಕ್ತಿಯೋರ್ವ ಅದೇ ಚಿಂತೆಯಲ್ಲಿ ಮನನೊಂದು ಮನೆಯ ಟಾರಸಿನ ಮೇಲಿನ ಕಬ್ಬಿಣದ ಪಕ್ಕಾಸಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನ ಬಡಾ ಎರ್ಮಾಳು ಗ್ರಾಮದ  ಸಾಲ್ಯಾನ್ ಮೂಲಸ್ಥಾನದ ಬಳಿ ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ಬಡಾ ಎರ್ಮಾಳು ಗ್ರಾಮದ  ಸಾಲ್ಯಾನ್ ಮೂಲಸ್ಥಾನದ ಬಳಿಯ ನಿವಾಸಿ 27 ವರ್ಷದ ಸಾಗರ್ ಕರ್ಕೇರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತ ಸುಮಾರು ಎರಡು ವರ್ಷಗಳ ಹಿಂದೆ  ಮುಂಬೈ ಎಲ್ & ಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 10 ತಿಂಗಳ ಹಿಂದೆ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಊರಿಗೆ ಬಂದು ತಂದೆ- ತಾಯಿ ಜೊತೆ ವಾಸವಾಗಿದ್ದನು. ಇದೇ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಅಲ್ಲದೆ, ತಂದೆಯೂ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಮಾನಸಿಕವಾಗಿ ನೊಂದ ಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಮೇ. 7ರಂದು ಬೆಳಿಗ್ಗೆ ಪತ್ನಿ ಪ್ರಿಯಾಂಕ ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.