ಶಿರ್ವದಲ್ಲೊಬ್ಬ ತದ್ರೂಪಿ ರಿಷಭ್ ಶೆಟ್ಟಿ: ಕಾಂತಾರದ ಶಿವ ಪಾತ್ರಧಾರಿ ರಿಷಭ್ ರೀತಿ ಕಾಣುವ ವ್ಯಕ್ತಿಗೆ ಬೇಸ್ತು ಬಿದ್ದ ಜನ!

ಶಿರ್ವ: ಉಡುಪಿಯ ಶಿರ್ವದ ಪಂಜಿಮಾರಿನಲ್ಲೊಬ್ಬ ಹೆಚ್ಚುಕಡಿಮೆ ಕಾಂತಾರದ ಶಿವ ಪಾತ್ರಧಾರಿಯಾದ ರಿಷಭ್ ಶೆಟ್ಟರಂತೆಯೆ ಕಾಣುವ ವ್ಯಕ್ತಿಯೊಬ್ಬರಿದ್ದಾರೆ. ದೂರದಿಂದ ನೋಡಿದಾಗ ರಿಷಭ್ ಶೆಟ್ರೇ ಬಂದರೇನೋ ಅನ್ನಿಸಿಬಿಡುತ್ತದೆ. ಆದರೆ ಹತ್ತಿರಹೋಗಿ ನೋಡಿದಾಗ ಇದು ರಿಷಭ್ ಶೆಟ್ರಲ್ಲ ಬದಲಿಗೆ ಅವರ ತದ್ರೂಪಿ ಎನ್ನುವುದು ಗೊತ್ತಾಗಿ ಜನ ಬೇಸ್ತು ಬೀಳುತ್ತಿದ್ದಾರೆ!

ಶಿರ್ವದ ಪಂಜಿಮಾರಿನ ನಿವಾಸಿ ಪ್ರದೀಪ್ ಆಚಾರ್ಯ ಇವರೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವ ಜ್ಯೂನಿಯರ್ ರಿಷಭ್ ಶೆಟ್ಟಿ. ಪ್ರಸ್ತುತ ಇವರು ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಕಾಂತಾರದ ಶಿವ ಪಾತ್ರದಲ್ಲಿ ರಿಷಭ್ ಶೆಟ್ರ ಗೆಟಪ್ ನಲ್ಲಿ ಇನ್ಸ್ಟಾಗ್ರಾಂ ನಲ್ಲಿ ರೀಲ್ ಗಳನ್ನು ಮಾಡುತ್ತಿದ್ದಾರೆ. ಇವರ ರೀಲ್ ಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ರೀಲ್ ವೈರಲ್ ಆದಾಗಿನಿಂದ ಜನರು ಇವರನ್ನು ಜ್ಯೂನಿಯರ್ ರಿಷಭ್ ಶೆಟ್ಟಿ ಎಂದು ಗುರುತಿಸುತ್ತಿದ್ದಾರಂತೆ. ಇವರ ಜೊತೆ ನಿಂತು ಸೆಲ್ಫಿ ತೆಗೆಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರದೀಪ್ ಇದರಿಂದ ತುಂಬಾ ಖುಷಿಯಾಗಿದೆ. ಯಾರೋ ಗುರುತು ಪರಿಚಯದವರು ರಿಶಭ್ ಶೆಟ್ರಂತೆ ಕಾಣುತ್ತೀರಿ ಎನ್ನುತ್ತಿದ್ದರು, ಮೊದಲಿಗೆ ಅಷ್ಟೊಂದು ಗೊತ್ತಾಗದಿದ್ದರೂ ಸೂಕ್ಷ್ಮವಾಗಿ ಗಮನಿಸಿದ ಮೇಲೆ ತನಗೂ ಹಾಗನ್ನಿಸಿತ್ತು ಎನ್ನುತ್ತಾರೆ.

ಇದೀಗ ರಿಷಭ್ ಶೆಟ್ರಂತೆಯೆ ದೇಹ ಭಾಷೆ, ಆಂಗಿಕಾಭಿನಯ ಮತ್ತು ಸ್ವರದ ಏರಿಳಿತಗಳನ್ನು ಕಲಿಯುತ್ತಿದ್ದಾರೆ ಪ್ರದೀಪ್. ಮುಂದೊಂದು ದಿನ ರಿಷಭ್ ಶೆಟ್ರನ್ನು ನೋಡಬೇಕು ಮತ್ತು ಅವರ ಜೊತೆ ಸೆಲ್ಫಿ ತೆಗಿಸಿಕೊಳ್ಳಬೇಕು ಎನ್ನುವುದು ಇವರ ಮನದಾಸೆ.