ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ರಕ್ತಸಿಕ್ತ ಸಂಘರ್ಷದಿಂದ ಗಾಯಗೊಂಡ ಗಂಡು ಚೀತಾ

ತೆರೆದ ಕುನೋ ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಚೀತಾಗಳ ಎರಡು ಗುಂಪಿನ ನಡುವೆ ಸಂಘರ್ಷ ನಡೆದಿದ್ದು, ಪರಿಣಾಮ ಆಫ್ರಿಕನ್ ಗಂಡು ಚೀತಾ ಅಗ್ನಿ ಗಾಯಗೊಂಡಿದೆ.
ಶಿಯೋಪುರ,ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಚೀತಾಗಳ ನಡುವೆ ಕಾದಾಟ ನಡೆದಿದೆ.ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಕಾದಾಟದಲ್ಲಿ ಸ್ಥಳಾಂತರಗೊಂಡಿದ್ದ ಆಫ್ರಿಕನ್ ಗಂಡು ಚೀತಾ ಅಗ್ನಿ ಗಾಯಗೊಂಡಿದೆ.

“ಸೋಮವಾರ ಸಂಜೆ ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶದಲ್ಲಿ ಎರಡು ಗುಂಪಿನ ಚೀತಾಗಳ ನಡುವೆ ಘರ್ಷಣೆ ನಡೆದ ಬಳಿಕ ಅಗ್ನಿ ಎಂಬ ಗಂಡು ಚೀತಾಗೆ ಗಾಯಗೊಂಡಿದೆ. ಗಾಯಗೊಂಡ ಅಗ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಸದ್ಯಕ್ಕೆ ಅದರ ಸ್ಥಿತಿ ಸುಧಾರಿಸಿದೆ” ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಗಾಯಗೊಂಡ ಸ್ಥಿತಿಯಲ್ಲಿದ್ದ ಅಗ್ನಿಯನ್ನು ಚೀತಾ ನಿಗಾ ತಂಡದ ಮಂದಿ ಮೊದಲು ನೋಡಿದ್ದು, ತಕ್ಷಣ ಕುನೋ ಆಡಳಿತ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ತಜ್ಞರೊಂದಿಗೆ ಸ್ಥಳಕ್ಕಾಮಿಸಿದ ಸಿಬ್ಬಂದಿ, ಚಿಕಿತ್ಸೆಗಾಗಿ ಕುನೋದಲ್ಲಿನ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಬಳಿಕ ಅಗ್ನಿ ಸ್ಥಿತಿ ಸುಧಾರಿಸುತ್ತಿದೆ.

ಕುನೋದಲ್ಲಿ ನಡೆಯುತ್ತಿರುವ ಚೀತಾಗಳ ಕಾದಾಟ ಅಧಿಕಾರಿಗಳಲ್ಲಿ ಕಳವಳವನ್ನು ಉಂಟು ಮಾಡಿದೆ. ನಮೀಬಿಯಾದಿಂದ ತಂದ ಗೌರವ್ ಮತ್ತು ಶೌರ್ಯ ಹಾಗೂ ದಕ್ಷಿಣ ಆಫ್ರಿಕಾದಿಂದ ತಂದ ವಾಯು ಮತ್ತು ಅಗ್ನಿ ತೆರೆದ ಕಾಡಿನಲ್ಲಿ ತಿರುಗಾಡುತ್ತಿವೆ. ಮಂಗಳವಾರ ಬೆಳಗ್ಗೆ ನಮೀಬಿಯಾದ ಶೌರ್ಯ ಮತ್ತು ದಕ್ಷಿಣ ಆಫ್ರಿಕಾದ ಅಗ್ನಿ ನಡುವೆ ಪರಸ್ಪರ ಕಾದಾಟ ನಡೆದಿದೆ ಎಂದು ಹೇಳಲಾಗಿದೆ. ಈ ಹೋರಾಟದಲ್ಲಿ ಗಂಡು ಚೀತಾ ಅಗ್ನಿ ಗಾಯಗೊಂಡಿದೆ.

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಮಾರ್ಗಸೂಚಿಗಳ ಪ್ರಕಾರ ಕಾಡು ಪ್ರಭೇದಗಳ ವಿಶೇಷವಾಗಿ ಚೀತಾಗಳ ಮರುಪರಿಚಯವನ್ನು ಕೈಗೊಳ್ಳಲಾಗಿದೆ.

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಚೀತಾಗಳನ್ನು ತೆರೆದ ಅರಣ್ಯದಲ್ಲಿ ವಿಹಾರಕ್ಕಾಗಿ ಆವರಣದಿಂದ ಒಂದೊಂದಾಗಿ ಬಿಡಲಾಗುತ್ತಿದೆ. ಒಂದು ದಿನದ ಮೊದಲು, ದಕ್ಷಿಣ ಆಫ್ರಿಕಾದಿಂದ ತರಲಾದ ಹೆಣ್ಣು ಚೀತಾ ವೀರಾವನ್ನು ದೊಡ್ಡ ಆವರಣದಿಂದ ತೆರೆದ ಅರಣ್ಯಕ್ಕೆ ಬಿಡಲಾಗಿತ್ತು.

ಈಗಾಗಲೇ ಬಯಲು ಅರಣ್ಯದಲ್ಲಿ ಓಡಾಡುತ್ತಿರುವ ಚೀತಾಗಳ ನಡುವೆ ಯಾವುದೇ ಸಂಘರ್ಷ ಉಂಟಾಗದಂತೆ ಕುನೋ ನಿರ್ವಹಣಾ ಅಧಿಕಾರಿಗಳು ಪಾಲ್ಪುರ್ ವ್ಯಾಪ್ತಿಯ ಕುನೋ ನದಿಯ ಇನ್ನೊಂದು ಬದಿಯಲ್ಲಿ ಹೆಣ್ಣು ಚೀತಾವನ್ನು ಬಿಡುಗಡೆ ಮಾಡಲಾಗಿದೆ.

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಇಲ್ಲಿಯವರೆಗೆ ಒಟ್ಟು 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ.

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಚೀತಾಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದ ಭಾಗವಾಗಿ ಕಳೆದ ವರ್ಷ ಸೆಪ್ಟೆಂಬರ್ 17 ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ಎಂಟು ಚೀತಾಗಳನ್ನು (5 ಹೆಣ್ಣು ಮತ್ತು 3 ಗಂಡು) ತಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ತರಲಾಗಿತ್ತು.

ಉದ್ಯಾನವನದಲ್ಲಿ ಜನಿಸಿದ ನಾಲ್ಕು ಮರಿಗಳಲ್ಲಿ ಮೂರು ಸೇರಿದಂತೆ ಆರು ಚೀತಾಗಳು ಸಾವನ್ನಪ್ಪಿವೆ. 20 ಚೀತಾಗಳಲ್ಲಿ 17 ಚೀತಾಗಳು ಉಳಿದಿವೆ. ಇವುಗಳಲ್ಲಿ 9 ಚೀತಾಗಳು ತೆರೆದ ಅರಣ್ಯದಲ್ಲಿದ್ದರೆ, 8 ಇನ್ನೂ ದೊಡ್ಡ ಆವರಣಗಳಲ್ಲಿವೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಯೋಜನೆಯು ಹಂತ ಹಂತವಾಗಿ ಪ್ರಗತಿಯಲ್ಲಿದೆ. ಕ್ರಮೇಣ, ಚೀತಾಗಳನ್ನು ಕ್ವಾರಂಟೈನ್ ಆವರಣದಿಂದ ಮೊದಲು ದೊಡ್ಡ ಆವರಣಕ್ಕೆ ಮತ್ತು ನಂತರ ತೆರೆದ ಅರಣ್ಯಕ್ಕೆ ಬಿಡಲಾಗುತ್ತಿದೆ.