ಕೊಲ್ಕತ್ತಾ: ಇಲ್ಲಿನ ಹೂಗ್ಲಿಯಲ್ಲಿ ಸ್ಥಳೀಯ ಬಾಲಕಿಯೊಬ್ಬಳು ರಾಷ್ಟ್ರವ್ಯಾಪಿ ನಿದ್ರಾ ಸ್ಪರ್ಧೆಯಲ್ಲಿ ಗೆದ್ದು 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾಳೆ. ಬಾಲ್ಯದಿಂದಲೂ ನಿದ್ರಿಸುವುದರಲ್ಲಿ ಎತ್ತಿದ ಕೈ ಹೊಂದಿದ್ದ ತ್ರಿಪರ್ಣ ಚಕ್ರವರ್ತಿ ಎನ್ನುವ ಹುಡುಗಿ, ಖಾಸಗಿ ಮ್ಯಾಟ್ರೆಸ್ ಕಂಪನಿ ನಡೆಸಿದ ಸ್ಪರ್ಧೆಯಲ್ಲಿ ದೇಶದ ಅತ್ಯುತ್ತಮ ನಿದ್ದೆಗಾರ್ತಿ ಆಗಿ ಹೊರಹೊಮ್ಮಿದ್ದಾಳೆ.
ಸುಮಾರು 5.5 ಲಕ್ಷಕ್ಕೂ ಹೆಚ್ಚು ಸಹ ಸ್ಪರ್ಧಿಗಳನ್ನು ಸೋಲಿಸಿ ತ್ರಿಪರ್ಣ ಈ ಬಹುಮಾನ ಗೆದ್ದಿದ್ದಾಳೆ. ಸತತ 100 ದಿನಗಳ ಕಾಲ ದಿನಕ್ಕೆ 9 ಗಂಟೆಗಳ ಕಾಲ ನಿದ್ರಿಸುವುದು ಸ್ಪರ್ಧೆಯ ಮುಖ್ಯ ನಿಯಮಗಳಲ್ಲಿ ಒಂದಾಗಿತ್ತು. ಶ್ರೀರಾಮಪುರದ ನಿವಾಸಿಯಾದ ತ್ರಿಪರ್ಣ, ಸಂದರ್ಭವನ್ನು ಲೆಕ್ಕಿಸದೆ ಯಾವುದೇ ಸ್ಥಳದಲ್ಲಿ ಮಲಗುವ ಸುದೀರ್ಘ ಇತಿಹಾಸವನ್ನು ಹೊಂದಿದ್ದಳು ಎಂದು ಹೇಳಲಾಗುತ್ತದೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತಿನಂತೆ ಆಕೆ ಸಮಯ ಸಂದರ್ಭಗಳನ್ನು ಲೆಕ್ಕಿಸದೆ ಎಲ್ಲೆಂದರಲ್ಲಿ ನಿದ್ದೆಗೆ ಜಾರುವ ಇತಿಹಾಸ ಹೊಂದಿದ್ದಳು ಎಂದು ವರದಿಗಳು ಹೇಳುತ್ತವೆ.
ಉಳಿದ ಸ್ಪರ್ಧಿಗಳನ್ನು ಹೋಲಿಸಿದಲ್ಲಿ ಆಕೆಯ ನಿದ್ರೆಯ ಸ್ಕೋರ್ 100 ರಲ್ಲಿ 95 ಆಗಿತ್ತು. ಫೈನಲ್ನಲ್ಲಿ ಆಕೆಯ ಪ್ರತಿಪಾದನೆಯನ್ನು ಪರಿಶೀಲಿಸಲು ಮ್ಯಾಟ್ರೆಸ್ ಸಂಸ್ಥೆಯಿಂದ ನಿಯೋಗವನ್ನು ಕಳುಹಿಸಲಾಗಿದೆ. ತ್ರಿಪರ್ಣ ಸದ್ಯ ಅಮೇರಿಕಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುವುದರಿಂದ ಹಗಲು ಹೊತ್ತಿನಲ್ಲಿ ಮಲಗಿರುತ್ತಾಳೆ.
“ಮಧ್ಯಾಹ್ನ ಮೂರು ಗಂಟೆಗಳ ನಿದ್ದೆ ಪಡೆಯುತ್ತೇನೆ. ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ತ್ರಿಪರ್ಣಾ ಹೇಳಿದ್ದಾಳೆಂದು ಮಾಧ್ಯಮ ವರದಿಯಾಗಿದೆ.
ಸಾಧನೆ ಮಾಡಲು ನಿದ್ದೆ ಬಿಡಬೇಕೆನ್ನುವುದು ಸಾಧಕರು ನೀಡುವ ಪ್ರೇರಣೆ. ಆದರೆ, ನಿದ್ದೆ ಮಾಡಿಯೂ ಸಾಧನೆ ಮಾಡಬಹುದು ಎನ್ನುವುದಕ್ಕೆ ತ್ರಿಪರ್ಣಾ ಉದಾಹರಣೆ!