ಎರ್ನಾಕುಲಂ: 2018 ರಲ್ಲಿ ಕೇರಳದ ವೈಕೋಮ್ನ ಕಾರ್ಯಕ್ರಮವೊಂದರಲ್ಲಿ ಹೊರಭಾಗದಲ್ಲಿ ಮುಳ್ಳುಗಳನ್ನು ಹೊಂದಿರುವ ಹೊಳೆಯುವ ಕೆಂಪು-ಕಿತ್ತಳೆ ಬಣ್ಣದಲ್ಲಿರುವ ಕಲ್ಲಂಗಡಿ ಗಾತ್ರದ ಹಣ್ಣು, ಜೊಜೊ ಪುನ್ನಕಲ್ ಅವರ ಗಮನವನ್ನು ಸೆಳೆಯಿತು. ಹಣ್ಣಿನ ಬಗ್ಗೆ ಕುತೂಹಲಗೊಂಡು ಕೆಲವು ಬೀಜಗಳನ್ನು ಸಂಗ್ರಹಿಸಿ ಅದನ್ನು ತಮ್ಮ ತೋಟದಲ್ಲಿ ಬೆಳೆದ ಜೊಜೋ ಅವರು ಇಂದು ಅದರ ಬೀಜ ಮಾತ್ರದಿಂದಲೇ ವರ್ಷಕ್ಕೆ 2 ಲಕ್ಷ ರೂ ಸಂಪಾದನೆ ಮಾಡುತ್ತಿದ್ದಾರೆ! ಎರ್ನಾಕುಲಂನ ಜೋಜೋ ಪುನ್ನಕಲ್ ಅವರು ಕಳೆದ ನಾಲ್ಕು ವರ್ಷಗಳಿಂದ ವಿಯೆಟ್ನಾಂನ ವಿಲಕ್ಷಣ ಮತ್ತು ಪೌಷ್ಟಿಕಾಂಶಗಳುಳ್ಳ ಗ್ಯಾಕ್ ಹಣ್ಣನ್ನು ಬೆಳೆಯುತ್ತಿದ್ದಾರೆ.
ಈ ಹಣ್ಣಿನ ಹೆಸರು ಸ್ವಲ್ಪ ವಿಚಿತ್ರವಾದರೂ ಇದರಲ್ಲಿರುವ ವೈದ್ಯಕೀಯ ಗುಣಗಳಿಂದಾಗಿ ಇದನ್ನು ‘ಸ್ವರ್ಗದ ಹಣ್ಣು’ ಎಂದೂ ಕರೆಯುತ್ತಾರೆ. ಕೇರಳದ ಅಂಗಮಾಲಿ ಸಮೀಪದ ಅಮಲಾಪುರಂನ ತಮ್ಮ ಮನೆಯ ತೋಟದಲ್ಲಿ ಜೋಜೋ ಈ ಹಣ್ಣುಗಳನ್ನು ಬೆಳೆಯುತ್ತಾರೆ. ವೈಜ್ಞಾನಿಕವಾಗಿ ‘ಮೊಮೊರ್ಡಿಕಾ ಕೊಚಿನೆನ್ಸಿಸ್’ ಎಂದು ಕರೆಯಲ್ಪಡುವ ಈ ಹಣ್ಣು ವಿಯೆಟ್ನಾಂ ಮೂಲದ್ದಾಗಿದೆ ಮತ್ತು ಆಗ್ನೇಯ ಏಷ್ಯಾದ ಬೆಚ್ಚಗಿನ ಹವಾಮಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಜೋಜೋ ತಮ್ಮ ಮನೆಯ ತಾರಸಿ, ಮುಂಭಾಗದ ಅಂಗಳ ಮತ್ತು ಅವರ ಮನೆಯ ಸುತ್ತಲಿನ 60 ಸೆಂಟ್ಸ್ ಜಮೀನಿನಲ್ಲಿ 30 ಕ್ಕೂ ಹೆಚ್ಚು ಗ್ಯಾಕ್ ಹಣ್ಣಿನ ಗಿಡಗಳನ್ನು ಬೆಳೆಸುತ್ತಾರೆ. ಸಸ್ಯದ ಬೀಜಗಳನ್ನು ಮಾರಾಟ ಮಾಡಿ ವರ್ಷಕ್ಕೆ ಸುಮಾರು 2 ಲಕ್ಷ ರೂ. ಸಂಪಾದಿಸುತ್ತಾರೆ. ಬಹುತೇಕ ಪ್ಯಾಷನ್ ಪ್ರೂಟ್ ಮತ್ತು ಕೊಕೋ ಹಣ್ಣನ್ನು ಹೋಲುವ ಗ್ಯಾಕ್ ಹಣ್ಣನ್ನು ಕತ್ತರಿಸಿದಾಗ, ಕಿತ್ತಳೆ-ಬಣ್ಣದ ತಿನ್ನಬಹುದಾದ ಒಳತಿರುಳಿರುತ್ತದೆ. ತಿರುಳಿನೊಳಗಿನ ಕಪ್ಪು-ಬಣ್ಣದ ಬೀಜಗಳಿಗೆ ಗಾಢ ಕೆಂಪು ಹೊದಿಕೆಯಿರುತ್ತದೆ. ಒಂದು ಹಣ್ಣು 1 ಕಿಲೋಗ್ರಾಂ ವರೆಗೆ ತೂಗುತ್ತದೆ ಮತ್ತು ಒಂದು ಸಸ್ಯವು ಒಂದು ಋತುವಿನಲ್ಲಿ 50 ಹಣ್ಣುಗಳನ್ನು ನೀಡುತ್ತದೆ ಎಂದು ಜೋಜೊ ಹೇಳುತ್ತಾರೆ. ಅವರು ಈಗ ವರ್ಷಕ್ಕೆ ಎರಡು ಬಾರಿ ಇಳುವರಿಯನ್ನು ಪಡೆಯುತ್ತಾರೆ. ಈ ಸಸ್ಯಗಳು ಸಾಮಾನ್ಯವಾಗಿ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಹಣ್ಣುಗಳನ್ನು ನೀಡಲು ಪ್ರಾರಂಭಿಸುತ್ತವೆ. ಇಳುವರಿ ಅವಧಿಯ ನಂತರ, ಮುಂದಿನ ಬಾರಿ ಉತ್ತಮ ಇಳುವರಿಗಾಗಿ ಬಳ್ಳಿಗಳನ್ನು ಕತ್ತರಿಸಬೇಕಾಗುತ್ತದೆ.
ಜೊಜೊ ಹೇಳುವಂತೆ ಈ ಹಣ್ಣುಗಳು ಉತ್ತಮ ಸೂರ್ಯನ ಬೆಳಕು ಮತ್ತು ನೀರಾವರಿ ಸಾಧ್ಯವಿರುವ ಸ್ವಲ್ಪ ಶುಷ್ಕ ವಾತಾವರಣವಿರುವ ಸ್ಥಳಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಗ್ಯಾಕ್ ಹಣ್ಣಿನ ಮರಗಳನ್ನು ಬೆಳೆಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಪರಾಗಸ್ಪರ್ಶಕ್ಕಾಗಿ ಗಂಡು ಮತ್ತು ಹೆಣ್ಣು ಸಸ್ಯಗಳನ್ನು ಬೆಳೆಸುವುದು ಅತ್ಯಗತ್ಯ. ಸ್ವಾಭಾವಿಕ ಪರಾಗಸ್ಪರ್ಶಕ್ಕಿಂತಲೂ ಮಾನವೀಯ ಹಸ್ತಕ್ಷೇಪದ ಪರಾಗಸ್ಪರ್ಶಗಳು ಅಧಿಕ ಇಳುವರಿಯನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ.
ಈ ಹಣ್ಣಿನ ತಿರುಳು, ಬೀಜ ಮತ್ತು ಎಲೆಗಳು ವೈದ್ಯಕೀಯ ಗುಣಗಳನ್ನು ಹೊಂದಿದ್ದು, ಕಣ್ಣು, ತ್ವಚೆ, ಹೃದಯದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತವಾಗಿವೆ. 1 ಕೆಜಿ ಗ್ಯಾಕ್ ಹಣ್ಣಿನ ಮಾರುಕಟ್ಟೆ ಬೆಲೆ 900 ರಿಂದ 1,200 ರೂ ಮತ್ತು ಹಣ್ಣಿನ ಬೀಜಗಳು ಪ್ರತಿ ಪ್ಯಾಕೆಟ್ ಗೆ 300 ರೂ. ಒಂದು ಪ್ಯಾಕೆಟ್ ನಲ್ಲಿ 6 ಬೀಜಗಳಿರುತ್ತವೆ. ಹಣ್ಣಿನಿಂದ ಜ್ಯೂಸ್, ಜ್ಯಾಮ್ ಮತ್ತಿತರ ಖಾದ್ಯ ವಸ್ತುಗಳನ್ನು ತಯಾರಿಸಬಹುದು.
ಗ್ಯಾಕ್ ಹಣ್ಣಿನ ಬೀಜ ಮತ್ತು ಹೆಚ್ಚಿನ ಮಾಹಿತಿಗಾಗಿ ಜೋಜೋವನ್ನು 8606856474 ಸಂಪರ್ಕಿಸಬಹುದು.
ಮಾಹಿತಿ ಕೃಪೆ: ದ ಬೆಟರ್ ಇಂಡಿಯಾ
ಚಿತ್ರ ಕೃಪೆ: ಇಂಟರ್ನೆಟ್