ಅಂಗವೈಕಲ್ಯದಿಂದ ಬಳಲುತ್ತಿರುವ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾಕಿರಣ: ಹತ್ತಿ ಬತ್ತಿ ತಯಾರಿಸಿ ಆತ್ಮನಿರ್ಭರತೆಯತ್ತ ಪಯಣ…

ಉಡುಪಿ: ಕಾರಣಾಂತರಗಳಿಂದ ಅಂಗವೈಕಲ್ಯ ಹೊಂದಿ ಇನ್ನೊಬ್ಬರ ಆಶ್ರಯದಲ್ಲಿ ಬದುಕುವಂತಾದಾಗ ಜೀವನವೇ ಬೇಡವೆಂದು ಆತ್ಮಹತ್ಯೆ ಮಾಡುವಂತಹ ಯೋಚನೆಗಳು ಬರುತ್ತವೆ. ಮನೆ ನಿಭಾಯಿಸಲು ತೆಗೆದುಕೊಂಡ ಸಾಲ, ಮಕ್ಕಳ ವಿದ್ಯಾಭ್ಯಾಸ, ಸಂಸಾರದ ಭಾರ ತೂಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರು ಹಲವರು. ಅಂಗವೈಕಲ್ಯವೇ ಒಂದು ಅಭಿಶಾಪವಾದಂತಹ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾ”ಕಿರಣ”ವಾಗಿ ಅವರ ಬೆಂಬಲಕ್ಕೆ ನಿಂತಿದೆ ಡಾ. ಶಶಿಕಿರಣ್ ಶೆಟ್ಟಿ ಅವರ ಹೋಂ ಡಾಕ್ಟರ್ ಫೌಂಡೇಶನ್.

ಕಳೆದ ಹಲವಾರು ವರ್ಷಗಳಿಂದ ಅಶಕ್ತರು, ಅನಾಥರು, ಅಸಾಹಯಕರು, ಕುಟುಂಬದಿಂದ ಪರಿತ್ಯಕ್ತ ವೃದ್ದರು, ಶಾಲಾ ವಿದ್ಯಾರ್ಥಿಗಳು, ರೈತರು ಮುಂತಾದ ಕಷ್ಟದಲ್ಲಿರುವವರ ದನಿಗೆ ಓಗೊಡುತ್ತಾ, ಯಾವುದೇ ಪ್ರಚಾರ, ಸ್ವಾರ್ಥ ಅಥವಾ ವೈಯಕ್ತಿಕ ಲಾಭದ ಹಂಗಿಲ್ಲದೆ ಸದ್ದಿಲ್ಲದೆ ಎಲೆ ಮರೆಯ ಕಾಯಿಯಂತೆ ತಮ್ಮ ಪಾಡಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಡಾ. ಶಶಿಕಿರಣ್ ಶೆಟ್ಟಿ.

ಇದುವರೆಗೂ 11 ವಿವಿಧ ರೀತಿಯ ಸಾಮಾಜಿಕ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಇವರ ಹೋಂ ಡಾಕ್ಟರ್ ಫೌಂಡೇಶನ್ ಇದೀಗ ಕಾರಣಾಂತರಗಳಿಂದ ಅಂಗವೈಕಲ್ಯ ಹೊಂದಿ ನಡೆಯಲಾಗದೆ ಹಾಸಿಗೆಯಲ್ಲೇ ಜೀವನ ದೂಡುವಂತಾದವರ ಬಾಳಿಗೆ ಬೆಳಕಾಗುವ ಕಾರ್ಯದಲ್ಲಿ ನಿರತವಾಗಿದೆ. ತಮ್ಮ ಹಂಗಿನ ಜೀವನಕ್ಕೆ ಮುಕ್ತಿ ಹಾಡಿ ಆತ್ಮನಿರ್ಭರರಾಗುವತ್ತ ರೋಗಿಗಳೂ ಮುಂದಡಿಯಿಡುತ್ತಿದ್ದಾರೆ. ತಾವು ಮಲಗಿದಲ್ಲಿಂದಲೇ ಅಥವಾ ತಮ್ಮ ವ್ಹೀಲ್ ಚೇರ್ ನಲ್ಲಿ ಕುಳಿತೇ ದೀಪದ ಬತ್ತಿಗಳನ್ನು ತಯಾರಿಸಿ ಹೋಂ ಡಾಕ್ಟರ್ ಫೌಂಡೇಶನ್ ಮೂಲಕ ಮಾರಾಟ ಮಾಡಿ ತಮ್ಮ ಅಂಗವೈಕಲ್ಯದ ನಡುವೆಯೂ ಸಂಸಾರದ ಖರ್ಚನ್ನು ಭರಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಸದ್ಯ ಹೋಂ ಡಾಕ್ಟರ್ ಫೌಂಡೇಶನ್ ನಲ್ಲಿ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ದಿನೇಶ್ ಶೆಟ್ಟಿ ಮತ್ತು ಅಪಘಾತದಿಂದ ಕಾಲಿನ ಗಂಟು ಮುರಿದು ಅಂಗವಿಕಲರಾಗಿರುವ ಲಕ್ಷ್ಮಣ ಪೂಜಾರಿ ಎನ್ನುವ ರೋಗಿಗಳು ಬತ್ತಿ ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದು ದಿನಕ್ಕೆ ಸರಿ ಸುಮಾರು 1000 ಬತ್ತಿ ತಯಾರಿಸಿ ಫೌಂಡೇಶನ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಆದಾಗ್ಯೂ, ಈ ಹತ್ತಿ ಬತ್ತಿಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆಯ ಕೊರತೆ ಇದೆ. ಸುಮಾರು 25 ಅಶಕ್ತ ರೋಗಿಗಳು ಫೌಂಡೇಶನ್ ಸಂಪರ್ಕದಲ್ಲಿದ್ದು, ಮಾರುಕಟ್ಟೆ ದೊರೆತಲ್ಲಿ ಹತ್ತಿ ಬತ್ತಿ ಮಾಡಿ ಕೊಡಲು ತಯಾರಾಗಿದ್ದಾರೆ. ಹತ್ತಿ ಬತ್ತಿಗಳನ್ನು ಬೇಡಿಕೆ ಇಟ್ಟ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಹೋಂ ಡಾಕ್ಟರ್ ಫೌಂಡೇಶನ್ ಮಾಡುತ್ತದೆ. ಗ್ರಾಹಕರು ಫೌಂಡೇಶನ್ ಅನ್ನು ಸಂಪರ್ಕಿಸಿ ತಮ್ಮ ವಿಳಾಸ ನೀಡಿ ತಮಗೆ ಬೇಕಾದಷ್ಟು ಹತ್ತಿ ಬತ್ತಿಗೆ ಆರ್ಡರ್ ಕೊಡಬಹುದು.

ಅಂಗವೈಕಲ್ಯದಿಂದ ಅಶಕ್ತರಾಗಿರುವವರು ತಯಾರಿಸಿದ ಹತ್ತಿ ಬತ್ತಿಗಳನ್ನು ಕೊಳ್ಳಲು ಪೂನಾದಿಂದ ಹಾಗೂ ರಾಜ್ಯದ ಇತರೆಡೆಗಳಿಂದ ಬೇಡಿಕೆ ಇದೆ. ಇವರು ತಯಾರಿಸಿದ ಹತ್ತಿ ಬತ್ತಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮಾರುಕಟ್ಟೆ ಒದಗಿಸಿ ಅವರ ಬಾಳಿಗೆ ಬೆಳಕಾಗುವುದು ನಮ್ಮ ಉದ್ದೇಶ. ದೇವಸ್ಥಾನಗಳು, ಮಾಲ್ ಗಳು ಮತ್ತು ಹತ್ತಿ ಬತ್ತಿ ಕೊಳ್ಳುವ ಸಗಟು ವ್ಯಾಪಾರಸ್ಥರು ಮುಂದೆ ಬಂದಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ಮುನ್ನಡೆಸುವ ಯೋಚನೆ ಇದೆ. ಅಂಗವಿಕಲರು ತಾವೂ ಕೂಡಾ ದುಡಿದು ಆತ್ಮನಿರ್ಭರರಾಗಿ ಬದುಕಬೇಕೆನ್ನುವುದು ನಮ್ಮ ಇಚ್ಛೆ. ಇದು ಪ್ರಚಾರ ಅಥವಾ ವ್ಯಾಪಾರಕ್ಕಾಗಿ ಮಾಡುತ್ತಿಲ್ಲ, ಬದಲಿಗೆ ಅಂಗವಿಕಲರ ಬಾಳಿನಲ್ಲಿ ಬೆಳಕು ತರುವ ಸದುದ್ದೇಶದಿಂದ ಕೈಗೆತ್ತಿಕೊಂಡಿರುವ ಕಾರ್ಯ. ಸಾರ್ವಜನಿಕರ ಸಹಕಾರವಿದ್ದಲ್ಲಿ ಇದನ್ನು ಇನ್ನೂ ಮುಂದೆ ಕೊಂಡು ಹೋಗಿ ಹಲವಾರು ಜನರ ಬಾಳನ್ನು ಬೆಳಗಬಹುದು ಎಂದು ಹೋಂ ಡಾಕ್ಟರ್ ಫೌಂಡೆಶನ್ ನ ಸಂಸ್ಥಾಪಕ ಡಾ. ಶಶಿಕಿರಣ್ ಶೆಟ್ಟಿ ಹೇಳುತ್ತಾರೆ.

ಅಂಗವೈಕಲ್ಯವನ್ನು ಮೆಟ್ಟಿ ನಿಂತು ತಮ್ಮ ಕಾಲ ಮೇಲೆ ನಿಲ್ಲಬೇಕು, ಇತರರಿಗೆ ಭಾರವಾಗದೆ ಸ್ವಾಭಿಮಾನದಿಂದ ಬದುಕಬೇಕು ಎನ್ನುವ ಇವರ ಛಲಕ್ಕೆ ಬೆಂಬಲವಾಗಿ ನಿಂತು ಇವರು ತಯಾರಿಸಿದ ಹತ್ತಿ ಬತ್ತಿಯಿಂದ ಹಣತೆ ಬೆಳಗಿ ದೇವರಿಗೆ ಕೈಮುಗಿದರೆ ಆ ದೇವರೂ ಕೂಡಾ ಸಂಪ್ರೀತನಾಗುತ್ತಾನೆ ಎನ್ನುವುದರಲ್ಲಿ ಯಾವುದೇ ಸಂಶಯವಿರಲಾರದು.

ಹತ್ತಿ ಬತ್ತಿ ಕೊಳ್ಳಲು ಆಸಕ್ತಿ ಇರುವವರು 9945130630 ಈ ಸಂಖ್ಯೆಯನ್ನು ಸಂಪರ್ಕಿಸಿ ಆರ್ಡರ್ ನೀಡಬಹುದು.

ಡಾ. ಶಶಿಕಿರಣ್ ಶೆಟ್ಟಿ ಅವರ ಈ ಕಾರ್ಯದಿಂದ ಇತರರೂ ಸ್ಪೂರ್ತಿ ಪಡೆಯಬಹುದು. ಅಂಗವೈಕಲ್ಯ ಒಂದು ಅಭಿಶಾಪವಲ್ಲ. ತಾವು ಅಸಹಾಯಕರು, ತಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಧೃತಿಗೆಟ್ಟು ನಿತ್ಯ ನರಕ ಅನುಭವಿಸಿ ಬದುಕುವ ಬದಲು ಈ ರೀತಿ ತಮ್ಮ ಕಾಲ ಮೇಲೆ ನಿಲ್ಲುವ ಪುಟ್ಟ ಪ್ರಯತ್ನಗಳನ್ನು ಇತರರೂ ಮಾಡಬಹುದು.

ಚಿತ್ರ/ವರದಿ: ಶರೋನ್ ಶೆಟ್ಟಿ