ನವದೆಹಲಿ: ಎಲ್ಐಸಿ ಉದ್ಯೋಗಿಗಳು ಮತ್ತು ಏಜೆಂಟರಿಗೆ ಕೇಂದ್ರ ಸರ್ಕಾರ ಗಣೇಶ ಚತುರ್ಥಿಗೆ ಭರ್ಜರಿ ಉಡುಗೊರೆ ನೀಡಿದೆ. ಗ್ರಾಚ್ಯುಟಿ ಮಿತಿ, ಕುಟುಂಬ ಪಿಂಚಣಿ, ವಿಮೆ ಕವರೇಜ್ನಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಹಣಕಾಸು ಸಚಿವಾಲಯ ಅನುಮೋದನೆ ಪಡೆದುಕೊಂಡಿದೆ.
ಕುಟುಂಬ ಪಿಂಚಣಿ ಹೆಚ್ಚಳ, ಏಜೆಂಟರ ಗ್ರಾಚ್ಯುಟಿ ಮಿತಿ ಏರಿಕೆ ಸೇರಿದಂತೆ ವಿವಿಧ ಕೊಡುಗೆಗಳನ್ನು ಕೇಂದ್ರ ಸರ್ಕಾರ ಎಲ್ಐಸಿ ಸಿಬ್ಬಂದಿಗೆ ಪ್ರಕಟಿಸಿದೆ.ಇದು ಭಾರತೀಯ ಜೀವ ವಿಮಾ ನಿಗಮದ(ಎಲ್ಐಸಿ) ಉದ್ಯೋಗಿಗಳು ಮತ್ತು ಏಜೆಂಟರು ಖುಷಿ ಪಡುವ ಸುದ್ದಿ.
ಭಾರತದ ಅತಿದೊಡ್ಡ ಜೀವ ವಿಮಾ ಸಂಸ್ಥೆ ಎಂಬ ಖ್ಯಾತಿಯನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಎಲ್ಐಸಿಯ ಸಿಬ್ಬಂದಿಗೆ ಕೇಂದ್ರ ಸರ್ಕಾರ ಗಣೇಶ ಚತುರ್ಥಿಗೆ ಭರ್ಜರಿ ಉಡುಗೊರೆ ನೀಡಿದೆ. ಗ್ರಾಚ್ಯುಟಿ ಮಿತಿ ಏರಿಕೆ, ಮರುನೇಮಿತ ಏಜೆಂಟ್ಗಳ ರಿನಿವಲ್ ಕಮಿಷನ್, ಅವಧಿ ವಿಮಾ ವ್ಯಾಪ್ತಿ, ಕುಟುಂಬ ಪಿಂಚಣಿ ಹೆಚ್ಚಳ ಮಾಡಲಾಗಿದೆ. ಇದು ಎಲ್ಐಸಿಯಲ್ಲಿ ಕೆಲಸ ಮಾಡುವ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು, 13 ಲಕ್ಷಕ್ಕೂ ಹೆಚ್ಚು ಏಜೆಂಟ್ಗಳಿಗೆ ಉತ್ಸಾಹ ಇಮ್ಮಡಿಗೊಳಿಸಲಿದೆ.
ಐಟಿ ಷೇರುಗಳಲ್ಲಿ ಎಲ್ಐಸಿ ಹೂಡಿಕೆ: ಕಳೆದ ತ್ರೈಮಾಸಿಕದಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಐಟಿ ಷೇರುಗಳಲ್ಲಿ ಎಲ್ಐಸಿ ಹೂಡಿಕೆ ಮಾಡಿ ಅಚ್ಚರಿ ಮೂಡಿಸಿತ್ತು. ಎಲ್ಐಸಿಯು ಐಟಿ ಷೇರುಗಳಲ್ಲಿ 8,000 ಕೋಟಿ ರೂ. ತೊಡಗಿಸಿತ್ತು. ಈ ವಲಯದಲ್ಲಿನ ಹೂಡಿಕೆ ಅಪಾಯವೆಂದು ತಜ್ಞರು ಎಚ್ಚರಿಕೆ ನೀಡಿದ್ದರೂ ದೊಡ್ಡ ಮಟ್ಟದಲ್ಲಿ ಹಣ ತೊಡಗಿಸಿ ಎಲ್ಐಸಿ ಧೈರ್ಯ ತೋರಿತ್ತು. ಎಲ್ಐಸಿ ಇನ್ಫೋಸಿಸ್ ಸಂಸ್ಥೆಯ 3,636 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ.
ಮೊದಲನೆಯದಾಗಿ ಎಲ್ಐಸಿ ಏಜೆಂಟ್ಗಳಿಗೆ ಸಿಗುವ ಗ್ರಾಚ್ಯುಟಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ 13 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಏಜೆಂಟ್ಗಳಿಗೆ ಲಾಭ ಸಿಗಲಿದೆ.
ಮರುನೇಮಕವಾದ ಏಜೆಂಟ್ಗಳಿಗೆ ಅವರು ಮಾಡಿಸಿದ ಹಳೆಯ ಪಾಲಿಸಿಗಳಿಗೆ ರಿನಿವಲ್ ಕಮಿಷನ್ ನೀಡಲಾಗುವುದು ಎಂದು ಹೇಳಿದೆ. ಈ ಹಿಂದೆ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾಗ ಗ್ರಾಹಕರಿಂದ ಮಾಡಿಸಿದ್ದ ಪಾಲಿಸಿಗಳಿಗೆ ರಿನಿವಲ್ ಕಮಿಷನ್ ನೀಡುತ್ತಿರಲಿಲ್ಲ.
ಏಜೆಂಟ್ಗಳ ಟರ್ಮ್ ಇನ್ಷೂರೆನ್ಸ್ ಕವರ್ ಅನ್ನು 25,000 ದಿಂದ 1,50,000 ರೂ.ಗೆ ಏರಿಸಲಾಗಿದೆ. ಈ ಮೊದಲು ಇದು 3,000 ರೂ.ನಿಂದ 10,000 ರೂ.ವರೆಗಿನ ಶ್ರೇಣಿಯಲ್ಲಿ ಇತ್ತು.
ಎಲ್ಐಸಿ ಉದ್ಯೋಗಿಗಳ ಕುಟುಂಬಗಳ ಯೋಗಕ್ಷೇಮಕ್ಕಾಗಿ ಶೇ.30ರ ಸಮಾನ ದರದಲ್ಲಿ ಕುಟುಂಬ ಪಿಂಚಣಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಹಲವು ಖಾಸಗಿ ವಿಮಾ ಸಂಸ್ಥೆಗಳ ಪೈಪೋಟಿಯ ನಡುವೆಯೂ ಎಲ್ಐಸಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಜೊತೆಗೆ ಅದರ ಆದಾಯ ಹೆಚ್ಚಳದ ವೇಗವೂ ವೃದ್ಧಿಸುತ್ತಿದೆ. ಎಲ್ಐಸಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಹಲವು ಉತ್ತಮ ಕ್ರಮಗಳನ್ನು ಘೋಷಿಸಿದ್ದು, ಫಲಾನುಭವಿ ಉದ್ಯೋಗಿಗಳು ಮತ್ತು ಏಜೆಂಟರು ಹೆಚ್ಚಿನ ಉತ್ಸಾಹದಲ್ಲಿ ಕೆಲಸ ಮಾಡಲು ಪ್ರೇರೇಪಿಸಲಿದೆ.