ತಮಿಳುನಾಡು: ಸಾವು ಎಷ್ಟು ಅನಿರೀಕ್ಷಿತ ಅನ್ನೋದಕ್ಕೆ ಈ ಘಟನೆ ಮನಕಲಕುವ ಉದಾಹರಣೆ. ಆಟವಾಡುತ್ತಿದ್ದ ಮೂರು ವರ್ಷದ ಪುಟ್ಟ ಕಂದ, ತಿಳಿಯದೆ ಹಳಸಿದ ಆಹಾರ ತಿಂದ ಪರಿಣಾಮ ಜೀವ ಕಳೆದುಕೊಂಡಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದ ಈ ದುರಂತ ಇದೀಗ ಪೋಷಕರಲ್ಲಿ ಆತಂಕ ಮೂಡಿಸಿದೆ.
ಅಂಬೂರು ಸಮೀಪದ ಮಥಗಡಪ್ ಪ್ರದೇಶದ ಸತೀಶ್ ಹಾಗೂ ಶ್ರೇಯಾ ದಂಪತಿಯ ಪುತ್ರಿ ಭೂಮಿಕಾ ಮೃತಪಟ್ಟ ಬಾಲಕಿ. ಕುಟುಂಬವು ನಾಯಿಗೆ ನೀಡಲು ಪಕ್ಕಕ್ಕೆ ಇಟ್ಟಿದ್ದ ಹಳಸಿದ ಕೋಳಿ ಸಾರನ್ನು ಭೂಮಿಕಾ ಹಾಗೂ ಆಕೆಯ ಒಂದು ವರ್ಷದ ತಂಗಿ ತಿಳಿಯದೆ ತಿಂದಿದ್ದಾರೆ ಎನ್ನಲಾಗಿದೆ. ಆಹಾರ ಸೇವಿಸಿದ ಕೆಲವೇ ಹೊತ್ತಿನಲ್ಲಿ ಇಬ್ಬರು ಮಕ್ಕಳಿಗೂ ವಾಂತಿ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭೂಮಿಕಾ ಆರೋಗ್ಯ ಗಂಭೀರವಾಗಿದ್ದರಿಂದ ಆಕೆಯನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಮೂರು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ಬಳಿಕ ಬಾಲಕಿ ಮೃತಪಟ್ಟಿದ್ದಾಳೆ. ಘಟನೆಯ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹಳಸಿದ ಆಹಾರ ತಿನ್ನುವ ಮೊದಲು ಯೋಚಿಸಿ:
ಹಳಸಿದ ಆಹಾರ ಎಷ್ಟು ಅಪಾಯಕಾರಿಯೆಂಬುದಕ್ಕೆ ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ. ಆಹಾರದಲ್ಲಿ ದುರ್ವಾಸನೆ ಇಲ್ಲದಿದ್ದರೂ ಅದು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಫುಡ್ ಪಾಯಿಸನಿಂಗ್ನಿಂದ ಡಿಹೈಡ್ರೇಷನ್, ಅಂಗಾಂಗ ವೈಫಲ್ಯ ಸೇರಿದಂತೆ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಮಕ್ಕಳಿಗೆ ಹಳೆಯ ಆಹಾರ ನೀಡುವಾಗ ಅಥವಾ ಮನೆಯಲ್ಲೇ ಹಾಗೇ ಇಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.
ಪುಟ್ಟ ಕಂದನ ಈ ದುರ್ಮರಣ ಇದೀಗ ಎಲ್ಲರ ಮನಸ್ಸನ್ನೂ ಕಲಕಿದ್ದು, ಪೋಷಕರ ಸಣ್ಣ ನಿರ್ಲಕ್ಷ್ಯವೂ ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದನ್ನು ಮತ್ತೆ ನೆನಪಿಸಿದೆ.

















