ಹೊಸ ಕನಸಿಗೆ ಬಣ್ಣ ತುಂಬುವ ಸಂಭ್ರಮದ ಯುಗಾದಿ: ಯುಗಾದಿ ಹಬ್ಬದ ವಿಶೇಷ ಬರಹ

ಕಾಡಂಚಿನ ದಾರಿಯೊಂದನ್ನು ಹೊಕ್ಕಾಗ ಸಾಲುದೂಪದ ಮರಗಳಲ್ಲಿ ತಿಳಿ ಹಳದಿ ಬಣ್ಣದ ಹೂಗಳ ಆಕರ್ಷಕ ಗೊಂಚಲುಗಳು ಆಕಾಶಕ್ಕೆ ಏರಿದ್ದವು. ತಿಳಿಗಾಳಿ ಬೀಸಿದಾಗ ನೆಲದ ಮೇಲೆ ರಾಶಿ ಹೂವುಗಳು ಬಿದ್ದು ಕಂಬಳಿ ಹಾಸಿದ್ದವು. ಅದರಾಚೆಗೆ ಬೂರುಗದ ಮರವೊಂದು ರಕ್ತ ವರ್ಣದ ಬಟ್ಟಲಿನಂತಹ ಹೂವುಗಳನ್ನು ಮುಡಿಗೇರಿಸಿಕೊಂಡು ಹತ್ತಾರು ಬಣ್ಣದ ಹಕ್ಕಿಗಳನ್ನು ಸೆಳೆಯುತ್ತಿದ್ದವು. ಕೊಂಚ ದೂರ ಹೋದಾಗ ದೈತ್ಯ ಕಾಡು ಮಾವಿನ ಮರ, ಹೂವು, ಮಿಡಿ ತುಂಬಿಕೊಂಡು ಹೊಚ್ಚಹೊಸ ಕನಸೊಂದನ್ನು ಕಾಣುವಂತೆ ನಿಂತಿತ್ತು. ಆ ಮೋಹಕ ದೃಶ್ಯ ನೋಡುತ್ತಲೇ ಮೈಮನಸ್ಸು, ಆ ಮಿಡಿ ಮಾವಿನ ಪರಿಮಳದಲ್ಲಿ, ಆ ಹಳೆಯ ಮರದ ಹೊಸತಾದ ಚೆಲುವಿನಲ್ಲಿ ಕಳೆದುಹೋದವು. ಬೇರೆ ದಿನಗಳಲ್ಲಿ ಮರ, ಹೂವುಗಳ ಸೊಬಗೆಲ್ಲಾ ನಮ್ಮ ಕಣ್ಣ ಸೆಳೆದರೂ, ಹೀಗೆ ನಿಸರ್ಗದ ಅಪ್ಪಟ ಸಹಜತೆಯಲ್ಲಿ ಕಳೆದುಹೋಗುವ ಭಾಗ್ಯ ಸಿಗುವುದು ಈ ಹೂವುಗಳೆಲ್ಲಾ ತುಂಬಿಕೊಳ್ಳುವ ಚೈತ್ರ ಕಾಲದಲ್ಲಿ ಮಾತ್ರ. ಎಲ್ಲವನ್ನೂ ಕಳೆದುಕೊಂಡು ಪುಟ್ಟ ಪುಟ್ಟ ಎಲೆಗಳನ್ನು ಮೂಡಿಸಿಕೊಂಡು ನಗಲು ಅಣಿಯಾಗುವ ಮರಗಳನ್ನು ನೋಡುವ, ನಮ್ಮೆದುರು ಮಾಯಾಲೋಕದಂತೆ ಸೃಷ್ಟಿಯಾಗುವ ಭೂಲೋಕದ ಈ ಅನುಪಮ ಸೌಂದರ್ಯ ನೋಡುವ ಭಾಗ್ಯ ಸಿಗುವುದು ಯುಗಾದಿಗೆ ಮಾತ್ರ. ಪ್ರಕೃತಿಯು ಹೊಸ ಬಗೆಯಲ್ಲಿ ಸಿಂಗರಿಸಿಕೊಳ್ಳುವುದನ್ನು ಕಂಡು ನಮ್ಮ ಕಣ್ಣುಗಳು ಹಿಗ್ಗಿ ಹೀರೇಕಾಯಿಯಾಗಬೇಕೆಂದರೆ ಯುಗಾದಿಯೇ ಬರಬೇಕು!


ಚುಂಚೈತಿ ಕಣ್ಣ ಎಷ್ಟೊಂದು ಬಣ್ಣ:
ಎಲ್ಲರಿಗೂ ಈ ಬಣ್ಣಗಳೆಂದರೆ ತೀರದ ಮೋಹ. ಒಂದೊಂದು ಬಣ್ಣಕ್ಕೂ ಒಂದೊಂದು ಸೊಗಸು. ಒಂದೊಂದು ಬಣ್ಣದಲ್ಲೂ ಒಂದೊಂದು ಹುರುಪು. ನಮ್ಮ ಮನಸ್ಸಿನ ಚೈತನ್ಯಕ್ಕೆ ಕಾರಣವಾಗುವ ಬಣ್ಣಗಳಲ್ಲೂ ನಮಗೇ ಅದೇನೋ ದಿವ್ಯ ಸಮಾಧಾನ, ನೆಮ್ಮದಿ ಸಿಗುತ್ತಂತೆ. ಕೆಲವೊಂದು ಬಣ್ಣದ ಬಟ್ಟೆ ತೊಟ್ಟಾಗಲೆಲ್ಲಾ ಅದೆಷ್ಟು ಸಂಭ್ರಮಿಸುತ್ತೇವೆ. ನಮಗೆ ಗೊತ್ತಾಗದಂತೆ ಆ ಬಣ್ಣ ನಮ್ಮೊಳಗೆ ಏನೋ ಲವಲವಿಕೆ ಮೂಡಿಸಿ, ಬದುಕಿಗೆ ಬೇಕಾದ ಶಕ್ತಿ ಮತ್ತು ಅಪರಿಮಿತ ಖುಷಿಯನ್ನೂ ಕೊಡುತ್ತಿರುತ್ತದೆ. ಆಕಾಶ ನೀಲಿ ಬಣ್ಣ ನೋಡಿದಾಗ ನಾವೂ ಆಕಾಶದಂತೆ ರಂಗೇಳುತ್ತೇವೆ, ಗಿಳಿ ಹಸಿರು ಬಣ್ಣ ನೋಡಿದಾಗ ಗಿಳಿಯಂತೆ ನಲಿಯುತ್ತೇವೆ, ಕೆಂಪು, ಗುಲಾಲಿ ಬಣ್ಣ ನೋಡಿದಾಗ ಹೂವಂತೆ ಅರಳಿಬಿಡುತ್ತೇವೆ. ಈ ಎಲ್ಲಾ ಬಣ್ಣಗಳೂ ನಿಸರ್ಗದಿಂದಲೇ ಬಂದಿದ್ದು. ಅದೂ ಈ ಯುಗಾದಿಯ ಹೊತ್ತಿಗೆ ಪ್ರಕೃತಿ ನಮ್ಮಂತೆಯೇ ಹೊಸ ಹೊಸ ಬಣ್ಣದ ಅಂಗಿ ತೊಟ್ಟುಕೊಂಡು ಕೇಕೆ ಹಾಕುವುದನ್ನು ಕಣ್ಣರಳಿಸಿ ನೋಡಿದರೆ ಒಂದು ಹೊಸ ಜೀವಂತಿಕೆಯಿಂದ ನಾವೂ ಹೊಳೆಯತೊಡಗುತ್ತೇವೆ.


ಪ್ರಕೃತಿಯ ಈ ಹಸಿರಿನಲ್ಲೇ ಎಷ್ಟೊಂದು ವೈವಿದ್ಯ, ತಿಳಿ ಹಸಿರು, ಗಾಢ ಹಸಿರು, ಮಬ್ಬು ಹಸಿರು, ಹಳದಿ ಮಿಶ್ರಿತ ಹಸಿರು, ಇನ್ನೂ ಹೆಸರು ಕೊಡಲಾಗದ ಗಮನಸೆಳೆಯುವ ಬಣ್ಣಗಳು. ಇನ್ನು ಕೆಂಪಿನಲ್ಲಿ ಗಾಢ ಕೆಂಪು, ನಸು ಕೆಂಪು, ಗುಲಾಬಿ ಕೆಂಪು, ಎಷ್ಟೊಂದು ವೈವಿದ್ಯತೆ, ಜಗದ ಎಲ್ಲಾ ಬಣ್ಣಗಳು ಪ್ರಕೃತಿಯ ಗಿಡ ಮರ ಬಳ್ಳಿಗಳಲ್ಲಿ, ಆಕಾಶ, ತೊರೆ, ನದಿಗಳಲ್ಲಿ, ಹುಲ್ಲು, ಮಣ್ಣು, ಕಲ್ಲುಗಳಲ್ಲಿ, ಹೂವು ಹಕ್ಕಿ ರೊಂಬೆಗಳಲ್ಲಿ ಸಿಕ್ಕಿಬಿಡುತ್ತದೆ. ಯಾವ ಕೃತಕತೆಯೂ ಇಲ್ಲದ ಆ ಬಣ್ಣಗಳು ನಮ್ಮದೆಯಲ್ಲಿ ಹೊಸ ಹೂವು ಅರಳಿಸುತ್ತದೆ.


ಇನ್ನು ಮಾವು, ಗೇರು, ಹಲಸಿನಕಾಯಿ, ಕಾಡು ಹಣ್ಣುಗಳ, ಅಶೋಕ, ಹೊಂಗೆ, ಕಣಗಿಲದಂತಹ ಹತ್ತಾರು ಹೂಗಳ, ಬಿಸಿಲಿಗೆ ಏಳುವ ಮಣ್ಣಿನ ಹಿತವಾದ ಪರಿಮಳದ ಲೋಕವೂ, ಕಾಜಾಣ, ಕೋಗಿಲೆ, ಮೈನಾ, ಹೂವಕ್ಕಿಗಳ ಸಂಗೀತದ ನಾಕವೂ ಸುತ್ತಲೂ ತೇಲಿಬಂದಾಗ, ಪಂಚೇದ್ರಿಯಗಳನ್ನೆಲ್ಲಾ ಆವರಿಸಿಕೊಳ್ಳುವ ಪುಳಕಕ್ಕೆ ಬೇರೆ ಹೋಲಿಕೆ ಯಾವುದಿದೆ? ಇಲ್ಲಿನ ಒಂದೊಂದು ಬಣ್ಣಗಳೂ ನಮ್ಮ ಸುಂದರ ನಾಳೆಗಳಿಗೆ ಕಾಮನಬಿಲ್ಲಾಗುತ್ತದೆ. ತಾಳ್ಮೆ, ಆತ್ಮಸ್ಥೈರ್ಯ, ಮಾನಸಿಕ ನೆಮ್ಮದಿಗೆ ಯುಗಾದಿಯ ಪಚ್ಚೆ ತೋರಣಗಳು ಬೆಳಕಾಗುತ್ತದೆ.


ಈ ಯುಗಾದಿಯಲ್ಲಿ ಪ್ರಕೃತಿಯಲ್ಲಿ ಸಿಗುವ ಹಣ್ಣುಗಳಿಂದಲೇ ಹೊಟ್ಟೆ ತುಂಬಿಕೊಂಡು ಯುಗಾದಿಯನ್ನು ಸಂಭ್ರಮಿಸಿದವರೆಷ್ಟು ಮಂದಿ. ಆಯಾ ಪ್ರಾದೇಶಿಕತೆಗೆ ಹೊಂದಿಕೊಂಡು ಪ್ರಕೃತಿಯ ಜೈವಿಕ ವ್ಯವಸ್ಥೆ ಬದಲಾದರೂ, ಪ್ರಕೃತಿ ಮನಷ್ಯನ ಬದುಕಿಗೆ ವೈವಿದ್ಯತೆ ಕೊಡುತ್ತಿದೆ. ಹಾಗಾಗಿ ಈ ಯುಗಾದಿಗೆ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ಬಗೆಯ ಸಡಗರವನ್ನು ಪ್ರಕೃತಿಯೊಂದಿಗೆ ಆಚರಿಸುತ್ತೇವೆ. ಆಚರಣೆಗಳಲ್ಲಿ ಹೊಸತನಗಳಿದ್ದರೂ ಪ್ರಕೃತಿ ಕೊಡುವ ಒಟ್ಟಾರೆ ಖುಷಿ ಒಂದೇ ಅಲ್ಲವೇ?


‘ಗಿರಿ ನದಿಗಳನಾವರಿಸಿದೆ ಹೊಸ ಚೇತನದುಸಿರು, ಬನಬನದಲಿ ಅಚ್ಚಾಗಿದೆ ಹೊಸ ವರ್ಷದ ಹೆಸರು ಬಳಕುವ ಎಲೆ ಚೆಲುವಿನ ಬಲೆ ಸಿರಿಯುಕ್ಕುವ ನೋಟ, ತಿಳಿಗೊಳದಲಿ ಹೊಂದಾವರೆ ಹೂವರಳಿದ ತೋಟ’ ಕನ್ನಡದ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಈ ಸಾಲುಗಳನ್ನು ಪ್ರಕೃತಿಯು ಸೃಷ್ಟಿಸಿದ ಮಧುಮಾಸದ ಸೌಂದರ್ಯನ್ನು ನೋಡುತ್ತ ಹಾಡಿದರೆ ಅದರ ಅನುಭೂತಿಯೇ ಬೇರೆ. ಒಮ್ಮೆ ಈ ಯುಗಾದಿಗೆ ಹೂ ಬಿಡುವ ಬಗೆಬಗೆ ಗಿಡಮರಗಳ ಎಲೆಗಳನ್ನು ಸೂಕ್ಷ್ಮವಾಗಿ ನೋಡಿ. ಮನಮೋಹಕ ಬಣ್ಣಗಳಿಂದ ವಿನ್ಯಾಸಗಳಿಂದ, ನುಣುಪುತನದಿಂದ, ಸೌಂದರ್ಯದಿಂದ ಮೂಡುತ್ತಿರುವ ಆ ಎಲೆಗಳು ನಿಮ್ಮಲ್ಲಿ ಹೊಸ ಭಾವನೆಯನ್ನು ಉಕ್ಕಿಸಬಹುದು. ಎಷ್ಟೊಂದು ಅಚ್ಚರಿಯಿದೆಯಪ್ಪಾ ಈ ಪ್ರಕೃತಿಯಲ್ಲಿ ಎನ್ನುವ ಉದ್ಗಾರ ಮೂಡಿಸಬಹುದು. ಪುಟ್ಟ ಪುಟ್ಟ ಮಕ್ಕಳಂತೆ ಕಾಣುವ ಆ ಎಲೆಗಳು,ಇಂದು ಪುಟ್ಟದಾಗಿದ್ದರೂ, ನಾಳೆ ಹೆಮ್ಮರವಾಗಿ ಬೆಳೆಯುತ್ತೇವೆ. ಹೊಸ ತಲೆಮಾರಿನ ಚಿಗುರುಗಳು ನಾವು ಎನ್ನುವ ಜೀವನಪಾಠ ಹೇಳುತ್ತದೆ. ಯುಗಾದಿಯ ಈ ಬಣ್ಣ ಬಣ್ಣದ ಎಲೆಗಳೇ ಪ್ರಕೃತಿಯ ನಿಜವಾದ ಗುರು ಎನ್ನಿಸಲು ಶುರುವಾಗುತ್ತದೆ.


ಮರಗಳು ಬೇಡ ಎಂದು ಮನುಷ್ಯ, ಗಿಡ ಮರಗಳನ್ನೆಲ್ಲಾ ಕತ್ತರಿಸಿದರೂ, ಅದೇ ಮರದ ಬುಡದಲ್ಲೆಲ್ಲೋ ಪುಟ್ಟ ಬೇರು ಭೂಮಿಗಿಳಿದು ಚಿಗುರೆಲೆ ಮೂಡಿಸುತ್ತಿರುತ್ತದೆ. ಎಂತಹ ಸತ್ವವಿಲ್ಲದ ಮಣ್ಣಿನಲ್ಲಿಯೂ ಪುಟ್ಟ ಹಸಿರ ಸಸಿಯೊಂದು ಅದರ ಪಾಡಿಗೆ ಚಿಗುರುತ್ತಿರುತ್ತದೆ. ಎಂತಹ ದುಸ್ತರ ಸನ್ನಿವೇಶದಲ್ಲೂ ನಮ್ಮನ್ನು ನಾವು ಕಳೆದುಕೊಳ್ಳದೇ ಮತ್ತೆ ಹೊಸ ಭರವಸೆಯಾಗಿ ಆ ಚಿಗುರಿನಂತೆ ಮೂಡಬೇಕು ಎನ್ನುವ ಪಾಠ ಕಲಿಸುವ ಈ ಪ್ರಕೃತಿಗೆ, ಈ ಯುಗಾದಿಗೆ ಇನ್ನಷ್ಟು ಹಸಿರಾಗೋಣ. ಪ್ರಕೃತಿ ಮೂಡಿಸಿರುವ ಅಚ್ಚರಿಯ ಸೊಬಗನ್ನು ಕಣ್ಣ ತುಂಬಿಕೊಳ್ಳೋಣ.

-ಪ್ರಸಾದ ಶೆಣೈ