ಉಡುಪಿ: ಎಡೆಬಿಡದೆ ಸುರಿಯುತ್ತಿರುವ ಭಾರೀ ಗಾಳಿಮಳೆಗೆ ಆದಿಉಡುಪಿ ಪ್ರೌಢಶಾಲೆ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಬೈಕ್ ಸವಾರನೊಬ್ಬ ಪವಾಡ ಸದೃಶವಾಗಿ ಪಾರಾಗಿದ್ದಾನೆ.
ಇಂದು ಸಂಜೆ 6.45ರ ಸುಮಾರಿಗೆ ಗಾಳಿಮಳೆಯ ಹೊಡೆತಕ್ಕೆ ಮರ ಬುಡ ಸಮೇತ ರಸ್ತೆಗೆ ಉರುಳಿ ಬೀಳುವಾಗ ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ ಎನ್ನಲಾಗಿದೆ. ಇದರಿಂದ ಬೈಕ್ ಹಾನಿಯಾಗಿದ್ದು, ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಮರ ರಸ್ತೆ ಉರುಳಿ ಬಿದ್ದ ಪರಿಣಾಮ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಅಗ್ನಿಶಾಮಕದಳ, ಅರಣ್ಯ ಇಲಾಖೆ ಹಾಗೂ ಪೊಲೀಸರು ಆಗಮಿಸಿ ಮರ ತೆರವು ಕಾರ್ಯ ನಡೆಸಿದರು. ಕ್ರೇನ್ ಬಳಸಿ ಸುಮಾರು ಅರ್ಧಗಂಟೆ ಯಲ್ಲಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.