ಕೊಲ್ಲೂರು ದೇಗುಲದ ಹೆಸರಿನಲ್ಲಿ ಭಕ್ತರಿಗೆ ವಂಚಿಸುತ್ತಿರುವ ನಕಲಿ ಟ್ರಸ್ಟ್: ಕೋಟ್ಯಂತರ ರೂ. ಹಣ ಸಂಗ್ರಹಣೆ ಆರೋಪ

ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಹೆಸರಿನಲ್ಲಿ ನಡೆಸಲಾಗುತ್ತಿರುವ ವಂಚನೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಟ್ರಸ್ಟ್ ನ ಲಿಂಕ್ ಹರಿದಾಡುತ್ತಿದ್ದು, ದೇಗುಲಕ್ಕೆ ದೇಣಿಗೆ ಹರಕೆ ಸಲ್ಲಿಸುವ ಭಕ್ತರು ಇದಕ್ಕೆ ಹಣ ಕಳಿಸುತ್ತಿದ್ದಾರೆ. ಈ ಬಗ್ಗೆ ಭಕ್ತರೊಬ್ಬರು ದೇಗುಲದ ಆಡಳಿತ ಮಂಡಳಿಗೆ ಇ-ಮೇಲ್ ಮಾಡಿದಾಗ ಈ ಖಾತೆಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಅಂತ ಸ್ಪಷ್ಟನೆ ಬಂದಿದೆ. ಆ ಬಳಿಕ ಮೂಕಾಂಬಿಕೆಯ ಭಕ್ತರಾಗಿರುವ ರಾಘವೇಂದ್ರ ಹಾಗೂ ಧನಂಜಯ್ ಎಂಬ ವ್ಯಕ್ತಿಗಳು ಈ ಟ್ರಸ್ಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿ ನಕಲಿ ಟ್ರಸ್ಟ್ ನೋಂದಣಿಯಾಗಿದೆ ಎಂದು ದೂರುದಾರ ರಾಘವೇಂದ್ರ ತಿಳಿಸಿದ್ದಾರೆ. “ಟ್ರಸ್ಟ್ ರಚಿಸಿದವರಿಗೆ ಕೊಲ್ಲೂರು ದೇವಸ್ಥಾನವು ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುತ್ತದೆ ಎಂದು ತಿಳಿದಿಲ್ಲ. ದೇವಸ್ಥಾನದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರಿಗೆ ವಂಚನೆ ಮಾಡಲಾಗುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ನಕಲಿ ಟ್ರಸ್ಟ್‌ ಬಾರದಿರುವುದು ಅಚ್ಚರಿ ಮೂಡಿಸಿದೆ. ಈಗಿನ ಅರ್ಚಕ ಸುಬ್ರಹ್ಮಣ್ಯ ಅಡಿಗರ ಹೆಸರು ಪತ್ರದಲ್ಲಿದೆ” ಎಂದು ಹೇಳಿದ್ದಾರೆ.

“ನಕಲಿ ಟ್ರಸ್ಟ್ 50 ಕೋಟಿಗೂ ಹೆಚ್ಚು ದೇಣಿಗೆ ಪಡೆದಿರುವ ಸಾಧ್ಯತೆ ಇದೆ. ಆದ್ದರಿಂದ, ತನಿಖೆ ಅಗತ್ಯ, ವಿಶೇಷವಾಗಿ 2022 ರಿಂದ ಭಕ್ತರು ವಂಚನೆಗೆ ಒಳಗಾಗುತ್ತಿದ್ದಾರೆ. ದೇವಸ್ಥಾನದ ಪ್ರಾಧಿಕಾರವು ನಕಲಿ ಟ್ರಸ್ಟ್ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನನಗೆ ಅನುಮಾನವಿದೆ. ನಕಲಿ ಟ್ರಸ್ಟ್‌ನಿಂದ ಕೋಟ್ಯಂತರ ರೂಪಾಯಿ ದುರ್ಬಳಕೆಯಾಗಿದೆ. ಆದ್ದರಿಂದ ಮುಜರಾಯಿ ಇಲಾಖೆ ಈ ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.