ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಎಫ್ಎಸ್ಎಲ್(FSL) ವರದಿ ಬಹಿರಂಗಪಡಿಸಲು ಬಿಜೆಪಿ ಒತ್ತಾಯಿಸಿದ್ದು,, ಈ ವಿಚಾರವಾಗಿ ಬಿಜೆಪಿ ಶಾಸಕರ ನಿಯೋಗ ಡಿಜಿ&ಐಜಿಪಿ ಕಚೇರಿಗೆ ಭೇಟಿ ನೀಡಿದೆ.
ಮೊದಲು FSL ಕಚೇರಿಗೆ ತೆರಳಲು ನಿರ್ಧರಿಸಿದ್ದ ಬಿಜೆಪಿ ನಿಯೋಗ ನಂತರ ಡಿಜಿ&ಐಜಿಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದೆ. ಬಿಜೆಪಿ ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸಿ.ಕೆ.ರಾಮಮೂರ್ತಿ, ಧೀರಜ್ ಮುನಿರಾಜುರಿಂದ ಬೆಂಗಳೂರಿನ ನೃಪತುಂಗರಸ್ತೆಯಲ್ಲಿರುವ ಡಿಜಿ&ಐಜಿಪಿ ಕಚೇರಿ ಭೇಟಿ ನೀಡಿ ಶೀಘ್ರದಲ್ಲೇ FSL ವರದಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಪ್ರತಿಕ್ರಿಯಿಸಿದ್ದು, 8 ದಿನ ಕಳೆದರೂ ಸರ್ಕಾರ ಎಫ್ಎಸ್ಎಲ್ ವರದಿ ಬಹಿರಂಗಪಡಿಸಿಲ್ಲ. ಎಫ್ಎಸ್ಎಲ್ ವರದಿ ಬಂದರೂ ಸರ್ಕಾರ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಹೀಗಾಗಿ ಬಿಜೆಪಿ ನಿಯೋಗದಿಂದ ಡಿಜಿ&ಐಜಿಪಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದು ದೇಶದ ಭದ್ರತೆ, ವಿಧಾನಸೌಧದ ಭದ್ರತೆ ವಿಚಾರವಾಗಿದೆ. ಮನಸಾಕ್ಷಿ ಇರುವ ಸರ್ಕಾರವಾಗಿದ್ದರೆ 24 ಗಂಟೆಯಲ್ಲಿ ಕ್ರಮ ಆಗಿರುತ್ತಿತ್ತು. 2-3 ದಿನದಲ್ಲಿ ವರದಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವಾಗಿದೆ. ಯಾವುದು ನಿಜ ಎಂದು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದಿದ್ದಾರೆ.
ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತ ಮೂವರನ್ನು ದೆಹಲಿಯ ಇಲ್ತಾಜ್, ಬೆಂಗಳೂರಿನ ಮುನಾವರ್ ಮತ್ತು ಕರ್ನಾಟಕದ ಹಾವೇರಿಯ ಮೊಹಮ್ಮದ್ ಶಫಿ ಎಂದು ಗುರುತಿಸಲಾಗಿದೆ.