ಕಾರ್ಕಳ: ಇಲ್ಲಿನ ಅನಂತಶಯನ ರಸ್ತೆಯ ಐಸಿಐಸಿಐ ಬ್ಯಾಂಕ್ ಎದುರಿಗಿರುವ ಫುಟ್ ಪಾತ್ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮೃತ್ಯಗುಂಡಿಯೊಂದನ್ನು ಕಾರ್ಕಳ ಪುರಸಭೆ ನಿರ್ಮಿಸಿದೆ! ಈ ಗುಂಡಿಯೊಳಗೆ ಬಿದ್ದು ಸತ್ತರೂ ಯಾರೂ ಕೇಳುವವರಿಲ್ಲ,
ಹೌದು ಕಾರ್ಕಳ ಪುರಸಭೆಯ ನಿರ್ಲಕ್ಷ್ಯತೆಯ ದೆಸೆಯಿಂದ ಪುಟ್ ಪಾತ್ ನಲ್ಲಿಯೇ ದೊಡ್ಡ ಗುಂಡಿಯೊಂದು ಹುಟ್ಟಿಕೊಂಡಿದೆ. ಕಾರ್ಕಳ ಸಿಂಡಿಕೇಟ್ ಬ್ಯಾಂಕ್ ನಿಂದ ಅನಂತಶಯನದತ್ತ, ಅನಂತಶಯನದಿಂದ ಕಾರ್ಕಳ ಬಸ್ ಸ್ಟ್ಯಾಂಡ್ ನತ್ತ ಬಲಗಡೆಯ ಫುಟ್ ಫಾಟ್ ನಲ್ಲಿ ನಡೆದುಹೋಗುವ ಪಾದಚಾರಿಗಳು ಈ ಗುಂಡಿಗೆ ಬಿದ್ದು ಗಾಯಗೊಳ್ಳುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ರಾತ್ರಿ ಹೊತ್ತಿನಲ್ಲಂತೂ ಈ ಮೃತ್ಯುಗುಂಡಿಯ ಅಸ್ತಿತ್ವವೇ ತಿಳಿಯದೇ ಜನರು ಗುಂಡಿಗೆ ಬೀಳುತ್ತಿರುವ ದೃಶ್ಯ ಮಾಮೂಲು ಎಂಬಂತಾಗಿದೆ.

ಜನರು ಫುಟ್ ಪಾತ್ ನಲ್ಲಿ ನಡೆಯುವುದು ಅವರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟು ಕೆಲ ತಿಂಗಳುಗಳೇ ಕಳೆದಿದೆ. ಆದರೆ ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿ ಜನರು ನಡೆದಾಡುವ ಫುಟ್ ಪಾತ್, ತೆರೆದ ಚರಂಡಿಯಾಗಿ, ಮೃತ್ಯುಗುಂಡಿಯಾಗಿ ಜನರನ್ನು ಬಲಿ ತೆಗೆದುಕೊಳ್ಳಲು ನಿಂತಿರುವುದು ದೊಡ್ಡ ದುರಂತ. ಯಾರಾದರೂ ಗುಂಡಿಗೆ ಬಿದ್ದು, ಅವರ ಜೀವ ಹೋದರೆ, ಗಾಯವಾದರೆ ಪುರಸಭೆಯೇ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರವೇ ಪುರಸಭೆ ಗುಂಡಿ ಮುಚ್ಚಿಬೇಕಿದೆ.
















