60 ವರ್ಷಗಳ ಬಳಿಕವೂ ಗಟ್ಟಿಮುಟ್ಟಾಗಿರುವ ಅಣೆಕಟ್ಟೆ: ಶರಾವತಿ ಒಡಲಲ್ಲಿ ಮರೆಯಾಗಿದ್ದ ‘ಮಡೇನೂರು ಡ್ಯಾಂ’ ಮತ್ತೆ ಗೋಚರ

ಶಿವಮೊಗ್ಗ: ಶರಾವತಿ ನದಿಯ ಗರ್ಭದಲ್ಲಿ ಹುದುಗಿ 60 ವರ್ಷಗಳು ಕಳೆದರೂ ‘ಮಡೇನೂರು ಅಣೆಕಟ್ಟೆ’ ಇಂದಿಗೂ ತನ್ನ ಸೌಂದರ್ಯವನ್ನು‌ ಹಾಗೆಯೇ ಉಳಿಸಿಕೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಈ ಅಣೆಕಟ್ಟೆ ಮುಳುಗಿ ಹೋಗಿದೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಮಡೇನೂರು ಅಣೆಕಟ್ಟೆ ಮತ್ತೆ ಹೊರ ಜಗತ್ತಿಗೆ ಕಾಣ ಸಿಗುತ್ತಿದೆ. ಮಡೇನೂರು ಡ್ಯಾಂ, ಹಿರೇಭಾಸ್ಕರ ಡ್ಯಾಂ ಎಂದು ಕರೆಯುತ್ತಾರೆ.
ಮಲೆನಾಡಿನ ಕಾನನದ ಗರ್ಭದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಕನಸಿನ ಕೂಸಾಗಿ ನಿರ್ಮಾಣಗೊಂಡು, ಅಕಾಲಿಕವಾಗಿ ಅವಸಾನ ಹೊಂದಿದ್ದ ಮಡೇನೂರು ಅಥವಾ ಹಿರೇಭಾಸ್ಕರ ಡ್ಯಾಂ ಮತ್ತೆ ಗೋಚರಿಸುತ್ತಿದೆ. 60 ವರ್ಷಗಳ ಬಳಿಕವೂ ಅಣೆಕಟ್ಟೆ ಈವರೆಗೆ ಗಟ್ಟಿಮುಟ್ಟಾಗಿರುವುದು ಇನ್ನೊಂದು ವಿಶೇಷ.

ಅಣೆಕಟ್ಟೆಯ ಇತಿಹಾಸ: ಶರಾವತಿ ನದಿಗೆ ಪ್ರಥಮವಾಗಿ ನಿರ್ಮಿಸಿದ ಅಣೆಕಟ್ಟು ಎಂದರೆ ಅದು ಮಡೇನೂರು ಅಣೆಕಟ್ಟು. 1939ರ ಬ್ರಿಟಿಷರ ಆಳ್ವಿಕೆಯಲ್ಲಿ ಈ ಡ್ಯಾಂ ನಿರ್ಮಾಣ ಮಾಡಲು ಪ್ರಾರಂಭಿಸಿದರು. ಮೈಸೂರಿನ ಪ್ರಸಿದ್ದ ಅರಸರಲ್ಲಿ ಒಬ್ಬರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1939ರ ಫೆಬ್ರವರಿ 5 ರಂದು ಅಡಿಗಲ್ಲು ಹಾಕಿದ್ದರು. ಮೈಸೂರಿನ ಇಂಜಿನಿಯರ್ ಆಗಿದ್ದ ಸುಬ್ಬರಾವ್ ಅವರ ನೇತೃತ್ವದಲ್ಲಿ ಡ್ಯಾಂ ನಿರ್ಮಾಣ ಮಾಡಲಾಯಿತು. ಇದು 114 ಅಡಿ ಎತ್ತರದಲ್ಲಿದೆ. ಇಲ್ಲಿ ಸುಮಾರು 25 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದಾಗಿದೆ.

11 ಸೈಫನ್ ನಿರ್ಮಾಣ: ಈ ಜಲಾಶಯದಲ್ಲಿ 18 ಅಡಿ ವ್ಯಾಸದ 58 ಅಡಿ ಎತ್ತರದ ಒಟ್ಟು 11 ಸೈಫನ್​ಗಳಿವೆ. ಸೈಫನ್​ಗಳ‌ ನಿರ್ಮಾಣಕ್ಕೆ ಆರ್​ಸಿ‌ಸಿ ಬಳಸಲಾಗಿದೆ. ಇದರಿಂದ ಸೈಫನ್ ಒಳಗೆ ಯಾವುದೇ ಮರ ಸೇರಿದಂತೆ ಇತರ ವಸ್ತುಗಳು ಸಿಲುಕಿ ಹಾಕಿಕೊಳ್ಳದಂತೆ ಒಳಗೆ ಜಾಲರಿಗಳನ್ನು ಅಳವಡಿಸಲಾಗಿದೆ. ಇಲ್ಲಿ ಪ್ರತಿಯೊಂದು ಸೈಫನ್​ನಿಂದ 12 ಕ್ಯೂಸೆಕ್ ನೀರು ಹೊರ ಹೋಗುವಂತೆ ನಿರ್ಮಾಣ ಮಾಡಲಾಗಿದೆ. ಇದು 114 ಅಡಿ ಎತ್ತರ ಹೊಂದಿದ್ದು, ಇಲ್ಲಿ 65.73 ಕ್ಯೂಬಿಕ್ ಅಡಿ ನೀರು ಸಂಗ್ರಹ ಮಾಡಬಹುದಾಗಿದೆ.

1947ರಲ್ಲಿ ಕಾಮಗಾರಿ ಮುಕ್ತಾಯ: ಅಣೆಕಟ್ಟೆಯನ್ನು ಬೆಲ್ಲ, ಮರಳು ಹಾಗೂ ಸುಣ್ಣದಿಂದ ತಯಾರು‌ ಮಾಡಿದ ಗಾರೆಯಿಂದ ನಿರ್ಮಾಣ ಮಾಡಲಾಗಿದೆ.‌ ಈ ಅಣೆಕಟ್ಟೆಯನ್ನು ಮುಖ್ಯವಾಗಿ ಮಹಾತ್ಮ ಗಾಂಧಿ ವಿದ್ಯುತ್ ಗಾರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ನಿರ್ಮಾಣ ಮಾಡಲಾಯಿತು. ಇದಕ್ಕಾಗಿ ಅಣೆಕಟ್ಟೆಯಲ್ಲಿ ಪ್ರತ್ಯೇಕ ಗೇಟ್​​ಗಳನ್ನು ನಿರ್ಮಾಣ ಮಾಡಲಾಗಿದೆ. ಅಣೆಕಟ್ಟೆಯಲ್ಲಿ ಪ್ರವಾಹ ತಪ್ಪಿಸಲು ಹಾಗೂ ಅಣೆಕಟ್ಟೆಗೆ ಅಪಾಯವಾಗದಂತೆ 11 ಸೈಫನ್ ನಿರ್ಮಾಣ ಮಾಡಲಾಗಿದೆ.

ಒಂದೂಂದು ಸೈಫನ್​ಗಳು ಸುಮಾರು 18 ಅಡಿ ವ್ಯಾಸ ಹೊಂದಿವೆ. ಮಡೇನೂರು ಡ್ಯಾಂ 1939ರಲ್ಲಿ ಪ್ರಾರಂಭವಾಗಿ 1947 ರ ಮುಕ್ತಾಯವಾಗುತ್ತದೆ. ಮುಕ್ತಾಯವಾದಗಲೇ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಪ್ರಾರಂಭ ಮಾಡಲಾಗುತ್ತದೆ. ಆದರೆ, 1948 ರ ಫೆಬ್ರವರಿಯಲ್ಲಿ ಮಹಾತ್ಮ ಗಾಂಧಿ ವಿದ್ಯುತ್ ಗಾರದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ.

16ನೇ ವರ್ಷಕ್ಕೆ ಮುಳುಗಡೆ: ಮಡೇನೂರು ಅಣೆಕಟ್ಟೆ ನಿರ್ಮಾಣವಾಗಿ ಸುಮಾರು 16ನೇ ವರ್ಷಕ್ಕೆ ಮುಳುಗಡೆಯಾಗುತ್ತದೆ. 1947ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾದಾಗ ಮೈಸೂರು ರಾಜ್ಯವಾಗುತ್ತದೆ. ಈ ವೇಳೆಗಾಗಲೇ ಮೈಸೂರು ರಾಜ್ಯಕ್ಕೆ ಪ್ರಥಮವಾಗಿ ‘ಶಿವನ ಸಮುದ್ರ’ದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ.

ಮೈಸೂರು ರಾಜ್ಯ ವಿಶಾಲವಾದ ಕಾರಣ ವಿದ್ಯುತ್ತಿನ ಬೇಡಿಕೆ ಹೆಚ್ಚಾದ ಕಾರಣ ಮೈಸೂರು ಅರಸರು ಲಿಂಗನಮಕ್ಕಿ ಬಳಿ ನಿರ್ಮಾಣವಾದ ಅಣೆಕಟ್ಟೆಯಿಂದ ಶರಾವತಿ ನದಿಯ ಪ್ರಥಮ ಅಣೆಕಟ್ಟು ಮುಳುಗಡೆಯಾಯಿತು. ಲಿಂಗನಮಕ್ಕಿ ಜಲಾಶಯ 1964 ರಲ್ಲಿ ನಿರ್ಮಾಣವಾಗುತ್ತದೆ. ಇದರಿಂದ ಮಡೇನೂರು ಅಣೆಕಟ್ಟೆಯ ಮೇಲೆ 41 ಅಡಿ ನೀರು ನಿಲ್ಲುತ್ತದೆ.

ಲಿಂಗನಮಕ್ಕಿ ಜಲಾಶಯ 1819 ಅಡಿ ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಮಡೇನೂರು ಅಣೆಕಟ್ಟು 1774 ಅಡಿ ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಪ್ರತಿ ಮಳೆಗಾಲದಲ್ಲಿ ಲಿಂಗನಮಕ್ಕಿ ಅಣೆಕಟ್ಟು ತುಂಬಿದಾಗ ಮಡೇನೂರು ಡ್ಯಾಂ ಮುಳುಗಡೆಯಾಗುತ್ತದೆ. ಅದೇ ಮೇ ತಿಂಗಳಲ್ಲಿ ಡ್ಯಾಂ ಗೋಚರವಾಗುತ್ತದೆ.

60 ವರ್ಷ ನೀರಿನಲ್ಲಿದ್ದರು ಗಟ್ಟಿಮುಟ್ಟಾಗಿರುವ ಡ್ಯಾಂ: ಮಡೇನೂರು ಡ್ಯಾಂ ನಿರ್ಮಾಣವಾಗಿ 80 ವರ್ಷಗಳಾಗಿವೆ. ನೀರಿನಲ್ಲಿ ಮುಳುಗಿ 60 ವರ್ಷಗಳಾಗಿವೆ. ಆದರೂ ಸಹ ಅಣೆಕಟ್ಟು ಇನ್ನೂ ಗಟ್ಟಿಯಾಗಿದೆ. ಅದರ ವಿನ್ಯಾಸ ಎಲ್ಲರನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿದೆ. ಸೈಫನ್​, ಅಂದಿನ ಟೆಕ್ಮಾಲಜಿ ಎಲ್ಲವು ಇಂದಿಗೂ ಸೂಜಿಗವೇ ಸರಿ. ಸತತವಾಗಿ ನೀರಿನಲ್ಲಿ ಇದ್ದ ಪರಿಣಾಮ ಅಣೆಕಟ್ಟು ಅಕ್ಕ ಪಕ್ಕದಲ್ಲಿ ಹಾಕಿದ್ದ ಕಲ್ಲಿನ ಒಡ್ಡುಗಳು ಒಡೆದು ಹೋಗಿವೆ. ಆದರೆ ಅಣೆಕಟ್ಟು ಇನ್ನೂ ಗಟ್ಟಿ ಮುಟ್ಟಾಗಿದೆ.

ಡ್ಯಾಂ ವೀಕ್ಷಣೆಗೆ ಪ್ರವಾಸಿಗರ ದೌಡು: ಡ್ಯಾಂಗೆ ತೆರಳಲು ಸಾಗರ ತಾಲೂಕು ಹೊಳೆಬಾಗಿಲಿಗೆ ಬರಬೇಕು. ಇಲ್ಲಿಂದ ಸಿಗಂದೂರಿಗೆ ಸಾಗುವ ಲಾಂಚ್​ ಏರಿ ಸಿಗಂದೂರು ಕಡೆಯ ಕಳಸವಳ್ಳಿ ಬಳಿ ಇಳಿದು ಮೂರಕ್ಕಿ ಗ್ರಾಮದ ಬಳಿ ಬಂದರೆ ಇಲ್ಲಿಂದ 2 ಕಿ. ಮೀ ದೂರದಲ್ಲಿ ಮಡೇನೂರು ಡ್ಯಾಂ ಇದೆ.

“ಬ್ರಿಟಿಷರು ಅತ್ಯಂತ ನೈಸರ್ಗಿಕವಾಗಿ ಅಣೆಕಟ್ಟನ್ನು ನಿರ್ಮಾಣ ಮಾಡಿದ್ದಾರೆ. ನೀರು ಸುಲಭವಾಗಿ ಹರಿಯಲು ಸಹಕಾರಿಯಾಗುವಂತೆ ನಿರ್ಮಿಸಿದ್ದಾರೆ. ಈಗ ಅಣೆಕಟ್ಟುಗಳಿಗೆ ರೇಡಿಯೆಟ್ ಗೇಟ್​ಗಳನ್ನು ಅಳವಡಿಸುತ್ತಾರೆ. ಆದರೆ ಮಡೇನೂರು ಡ್ಯಾಂನಷ್ಟು ಟೆಕ್ನಿಕಲ್ ಆಗಿ ಈಗ ನಿರ್ಮಾಣ ಮಾಡುವುದು ಕಷ್ಟಕರ” -ಕೆಪಿಸಿಯ ಎಇಇ ತೀರ್ಥಪ್ಪ
ಅಣೆಕಟ್ಟನ್ನು‌ ನೋಡಲು ಬಂದ ಪ್ರವಾಸಿಗರು ಇನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಸ್ಥಳೀಯರು ಸೇರಿದಂತೆ ಇತರ ಕಡೆಯಿಂದ ಪ್ರವಾಸಿಗರು ಇದರ ಸೊಬಗು ಹಾಗೂ ವಿನ್ಯಾಸ ಕಂಡು ಬೆರಗಾಗುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ಕಮಲಮ್ಮ. ಮಡೇನೂರಿನ ಬಗ್ಗೆ ತಿಳಿದ ನಾವು ಶಿರಸಿಯಿಂದ ನಮ್ಮ‌ ಕುಟುಂಬ ಸಮೇತವಾಗಿ ಇಲ್ಲಿಗೆ ಬಂದಿದ್ದೇವೆ. ಅಣೆಕಟ್ಟು ನೋಡಲು ಸುಂದರವಾಗಿದೆ.‌ ಇಷ್ಟು ವರ್ಷ ನೀರಿನಲ್ಲಿದದ್ದರೂ ತನ್ನ ಸೌಂದರ್ಯ ಕಳೆದುಕೊಂಡಿಲ್ಲ ಎನ್ನುತ್ತಾರೆ ಪ್ರವಾಸಿಗರು.