ಬಹುನಿರೀಕ್ಷಿತ ‘ವಿಶ್ವ ಸುಂದರಿ 2023’ರ ಸೌಂದರ್ಯ ಸ್ಪರ್ಧೆಯನ್ನು (Miss World 2023) ಈ ಬಾರಿ ಭಾರತ ಆಯೋಜಿಸಲಿದೆ.
Miss World 2023: ‘ವಿಶ್ವ ಸುಂದರಿ 2023’ರ ಸೌಂದರ್ಯ ಸ್ಪರ್ಧೆಯನ್ನು ಈ ಬಾರಿ ಭಾರತ ಆಯೋಜಿಸಲಿದೆ. ಭಾರತವನ್ನು ಆಯ್ಕೆ ಮಾಡಲು ಕಾರಣವೇನು? ಈ ಹಿಂದೆ ದೇಶದಲ್ಲಿ ಈ ಪ್ರತಿಷ್ಟಿತ ಸ್ಪರ್ಧೆ ನಡೆದಿದ್ದು ಯಾವಾಗ? ಕಂಪ್ಲೀಟ್ ಡಿಟೇಲ್ಸ್.
27 ವರ್ಷಗಳ ಬಳಿಕ ಭಾರತವು 71 ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಲಿದೆ. ಈ ವಿಚಾರವನ್ನು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿಯ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಉಪಸ್ಥಿತಿಯಲ್ಲಿ ಘೋಷಿಸಿದ್ದಾರೆ.
“ಈ ಪ್ರತಿಷ್ಠಿತ ಗೌರವವನ್ನು ಭಾರತಕ್ಕೆ ನೀಡುವ ನಿರ್ಧಾರವು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆಯನ್ನು ಉತ್ತೇಜಿಸುವ ಜೊತೆಗೆ ಮಹಿಳೆಯರ ಸಬಲೀಕರಣವನ್ನು ಗುರುತಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಕಾರಣಕ್ಕಾಗಿ ಭಾರತವನ್ನು ಆತಿಥೇಯ ರಾಷ್ಟ್ರವನ್ನಾಗಿ ಆಯ್ಕೆ ಮಾಡಲಾಗಿದೆ” ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಜೂಲಿಯಾ ಮೊರ್ಲಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿ, “71ನೇ ವಿಶ್ವ ಸುಂದರಿ ಫೈನಲ್ ಸ್ಪರ್ಧೆಗಾಗಿ ಭಾರತವನ್ನು ಘೋಷಿಸಲು ನನಗೆ ಸಂತೋಷವಾಗಿದೆ. 30 ವರ್ಷಗಳ ಹಿಂದೆ ನಾನು ಈ ಅದ್ಭುತ ದೇಶಕ್ಕೆ ಭೇಟಿ ಕೊಟ್ಟಿದ್ದೇನೆ. ಮೊದಲ ಕ್ಷಣದಿಂದ ನಾನು ಭಾರತದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೇನೆ.
ನಿಮ್ಮ ವೈವಿಧ್ಯಮಯ ಸಂಸ್ಕೃತಿ, ಸುಂದರ ಸ್ಥಳಗಳನ್ನು ಪ್ರಪಂಚದ ಉಳಿದ ಭಾಗಗಳೊಂದಿಗೆ ಹಂಚಿಕೊಳ್ಳಲು ಇನ್ನೂ ನಾವು ಕಾಯಲು ಸಾಧ್ಯವಿಲ್ಲ” ಎಂದು ಜೂಲಿಯಾ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ಮಿಸ್ ವರ್ಲ್ಡ್ 2023ಕ್ಕಾಗಿ 130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ತಮ್ಮ ವಿಶಿಷ್ಟ ಪ್ರತಿಭೆ, ಬುದ್ಧಿವಂತಿಕೆ ಮತ್ತು ಸೌಂದರ್ಯವನ್ನು ಪ್ರದರ್ಶಿಸಲು ಭಾರತಕ್ಕೆ ಆಗಮಿಸಲಿದ್ದಾರೆ. ಅವರು ಪ್ರತಿಭಾ ಪ್ರದರ್ಶನಗಳು, ಕೆಲವು ಸವಾಲುಗಳನ್ನು ಒಳಗೊಂಡಂತೆ ಕಠಿಣ ಸ್ಪರ್ಧೆಗಳನ್ನು ಎದುರಿಸಲಿದ್ದಾರೆ.
ಇದೆಲ್ಲವೂ ಅವರನ್ನು ಮಿಸ್ ವರ್ಲ್ಡ್ ಪಟ್ಟಕ್ಕಾಗಿ ಶ್ರಮ ಪಡುವಂತೆ ಮಾಡುತ್ತದೆ.
ಭಾರತಕ್ಕೆ ಆರು ಬಾರಿ ವಿಶ್ವ ಸುಂದರಿ ಕಿರೀಟ: ಭಾರತವು ಆರು ಬಾರಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದಿದೆ. 1966 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ರೀಟಾ ಫರಿಯಾ ಗೆದ್ದರೆ, ಐಶ್ವರ್ಯ ರೈ ಬಚ್ಚನ್ 1994 ರಲ್ಲಿ ಕಿರೀಟವನ್ನು ಪಡೆದರು. ಡಯಾನಾ ಹೇಡನ್ 1997 ರಲ್ಲಿ ಮಿಸ್ ವರ್ಲ್ಡ್ ಆದರು.
1999 ರಲ್ಲಿ ಯುಕ್ತಾ ಮುಖಿ ಕಿರೀಟ ಮುಡಿಗೇರಿಸಿಕೊಂಡರು. 2000 ರಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿಯಾದರು. 2017 ರಲ್ಲಿ ಮಾನುಷಿ ಛಿಲ್ಲರ್ ಆರನೇ ಮಿಸ್ ಇಂಡಿಯಾ ವರ್ಲ್ಡ್ ಆದರು.
1996ರ ಬಳಿಕ ಪ್ರತಿಷ್ಠಿತ ಅಂತರಾಷ್ಟ್ರೀಯ ಸ್ಪರ್ಧೆಯನ್ನು 27 ವರ್ಷಗಳ ನಂತರ ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆಯ ಮೂಲಕ ಮತ್ತೊಮ್ಮೆ ಭಾರತವು ಪ್ರಪಂಚದ ಕಣ್ಮನ ಸೆಳೆಯಲಿದೆ. ನವೆಂಬರ್/ಡಿಸೆಂಬರ್ 2023 ರಲ್ಲಿ ನಿಗದಿಪಡಿಸಲಾದ ಗ್ರ್ಯಾಂಡ್ ಫಿನಾಲೆಗೆ ಒಂದು ತಿಂಗಳ ಮೊದಲು ಭಾಗವಹಿಸುವವರ ಶಾರ್ಟ್ಲಿಸ್ಟ್ ಸಿದ್ಧಪಡಿಸಲು ಹಲವಾರು ಸುತ್ತುಗಳು ಇರುತ್ತವೆ.