ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಎಂಬಲ್ಲಿ ಶುಕ್ರವಾರ ಸಂಜೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಬಿ.ಸಿ.ರೋಡ್ ಕೈಕಂಬ ಪರ್ಲ್ಯ ಮದ್ದ ನಿವಾಸಿ ಜುನೈದ್ ಎಂಬವರ ಪುತ್ರ ಸಲ್ಮಾನ್ (15) ಮೃತಪಟ್ಟ ಬಾಲಕ. ಶುಕ್ರವಾರ ಶಾಲೆಗೆ ರಜೆ ಇದ್ದ ಕಾರಣ ನಾಲ್ಕು ಮಂದಿ ಗೆಳೆಯರು ಸಾಯಂಕಾಲ ಬ್ರಹ್ಮರಕೂಟ್ಲು ಬಂಟರ ಭವನದ ಬಳಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದರು. ಈಜುತ್ತಿದ್ದ ವೇಳೆ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತ ಸಲ್ಮಾನ್ ಬಿ.ಸಿ.ರೋಡ್ ಕೈಕಂಬದ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದನೆನ್ನಲಾಗಿದೆ.
ಸ್ಥಳಕ್ಕಾಗಮಿಸಿದ ಬಂಟ್ವಾಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.