ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರನ್ನು ಕಂಡು ಮೂರ್ಛೆ ಹೋದ ಹುಡುಗ: ಬಿಹಾರದಲ್ಲೊಂದು ಅಡ್ಮಿಟ್ ಕಾರ್ಡ್ ಅವಾಂತರ

ಪಟ್ನಾ: ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರ ನಡುವೆ ಏಕಾಂಗಿಯಾಗಿದ್ದ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದ ಪ್ರಕರಣವೊಂದು ಬಿಹಾರದಿಂದ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ. 12ನೇ ತರಗತಿಯ ಮನೀಷ್ ಶಂಕರ್ ಎನ್ನುವ ಈ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಆತನ ಲಿಂಗದ ಜಾಗದಲ್ಲಿ ‘ಗಂಡು’ ಬದಲಿಗೆ ‘ಹೆಣ್ಣು’ ಎಂದು ತಪ್ಪಾಗಿ ಬರೆದಿರುವುದೆ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ತಪ್ಪಾಗಿ ನಮೂದಾದ ಲಿಂಗದ ಕಾರಣದಿಂದಾಗಿ ಅವನು ಬರೇ ಹುಡುಗಿಯರೇ ತುಂಬಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿ ಬಂದಿದೆ.

ಸುಮಾರು 500 ವಿದ್ಯಾರ್ಥಿಯನಿಯರ ಒಂದು ಕೊಠಡಿಯಲ್ಲಿ ತಾನು ಒಬ್ಬನೇ ಹುಡುಗ ಎಂದು ಗೊತ್ತಾದಾಗ ಹುಡುಗ ಮಾನಸಿಕ ಒತ್ತಡ ಅನುಭವಿಸಿಕೊಂಡಿದ್ದಾನೆ ಮತ್ತು ಹೆದರಿಕೊಂಡಿದ್ದಾನೆ. ಈ ಮಧ್ಯೆ ಪರೀಕ್ಷಾ ಕೊಠಡಿಯಲ್ಲಿದ್ದ ಪರಿವೀಕ್ಷಕರೂ ಕೂಡಾ ಅವನನ್ನು ಪದೇ ಪದೇ ಪ್ರಶ್ನಿಸುತ್ತಿದ್ದರು ಎನ್ನಲಾಗಿದೆ. ಈ ಕಾರಣದಿಂದ ಅಧಿಕ ಒತ್ತಡದಿಂದಾಗಿ ಹುಡುಗನ ಆರೋಗ್ಯದಲ್ಲಿ ಏರುಪೇರಾಗಿದ್ದು, ಮೂರ್ಛೆ ಹೋಗಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಇದೀಗ ಆತ ಚೇತರಿಸಿಕೊಳ್ಳುತ್ತಿದ್ದಾನೆ.