ಕಾರ್ಕಳ: ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದ್ದು, ಪರಿಸರ ಉಳಿದರೆ ಭೂಮಿ ಉಳಿಯುತ್ತದೆ ಎಂಬ ಉದ್ದೇಶವನ್ನುಟ್ಟುಕೊಂಡು ಭೂಮಿ, ಕಾಡು ಪ್ರಾಣಿ, ಪಕ್ಷಿ ಪರಿಸರ ಜಾಗೃತಿಗಾಗಿ ಸಿದ್ಧನಾಗಿರುವ ಉಡುಪಿ ಜಿಲ್ಲೆಯ ಹಿರಿಯಡ್ಕ ಕಾಜಾರಗುತ್ತುವಿನ ನಿವಾಸಿಯಾದ ಗುರುರಾಜ್ ನಾಯಕ್.
ಗುರುರಾಜ್ ನಾಯಕ್ ಅವರು ಪರಿಸರ ಜಾಗೃತಿ ಮೂಡಿಸುವ ಮೂಲಕ ದೇಶವ್ಯಾಪ್ತಿಯಲ್ಲಿ ಸುಮಾರು 16,000 ಕಿ.ಮಿ ಬೈಕ್ ರ‍್ಯಾಲಿಯನ್ನು ಮಾಡಲು ಮುಂದಾಗಿದ್ದಾರೆ.
ಬಾಲ್ಯದಲ್ಲಿಯೇ ಪರಿಸರದ ಮೇಲೆ ಅಪಾರ ಕಾಳಜಿ:
ಮಣಿಪಾಲದ ಖಾಸಗಿ ಸಂಸ್ಥೆಯೊಂದರಲ್ಲಿ ಲೆಕ್ಕ ವಿಭಾಗದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಇವರು ಬಾಲ್ಯದಲ್ಲಿಯೇ ಪರಿಸರದ ಮೇಲಿನ ಎಲ್ಲಿಲ್ಲದ ಕಾಳಜಿ, ಸ್ವಚ್ಚ ಪರಿಸರದ ಜಾಗೃತಿ ಮೂಡಿಸುವ ಕೈಂಕರ್ಯಕ್ಕೆ ತೊಡಗಿಕೊಂಡವರು.
ಈ ಉದ್ದೇಶದಿಂದಲೇ ಅನೇಕ ಕಡೆಗಳಲ್ಲಿ ಚಾರಣವನ್ನು ಕೈಗೊಂಡಿದ್ದು, ಆ ಸಂದರ್ಭದಲ್ಲಿ ಪ್ರವಾಸಿಗರು ಎಸೆದಿರುವ ಪ್ಲಾಸ್ಟಿಕ್ ಕವರ್, ಕುಡಿದು ಎಸೆದ ಬಾಟಲ್ಸ್ ಗಳನ್ನು ಸಂಗ್ರಹಿಸಿ ಸಮೀಪದ ಡಂಪಿಂಗ್ ಯಾರ್ಡ್ಗಳಿಗೆ ತಲುಪಿಸುತ್ತಿದ್ದಾರೆ.
ನೀರಿಗಾಗಿ ಜನಜಾಗೃತಿ:
2018 ರಲ್ಲಿ ಇವರು ಮೊದಲ ಬಾರಿಗೆ ಹೊಸ ಸಾಹಸಕ್ಕೆ ಮುಂದಾಗಿದ್ದರು, ಶುದ್ದ ಕುಡಿಯುವ ನೀರಿನ ಕುರಿತು ಜನ ಜಾಗೃತಿ ಮೂಡಿಸಿದ ಇವರು ವಿವಿಧ ರಾಜ್ಯಗಳನ್ನು ಸಂಚರಿಸಿ ಕಾಶ್ಮೀರದ ಲಡಾಕ್ ವರೆಗೆ ಸುಮಾರು 18,000 ಕಿ.ಮೀ ಕ್ರಮಿಸಿ ಜನ ಜಾಗೃತಿ ಮೂಡಿಸಿದ್ದಾರೆ.
ಈ ಬಾರಿಯ ಬೈಕ್ ರ‍್ಯಾಲಿಯಲ್ಲಿ ಅಖಂಡ ಜಮ್ಮು ಕಾಶ್ಮಿರ, ಮಿಝೋರಾಂ, ಮಣಿಪುರ ಹೊರತು ಪಡಿಸಿ ಉಳಿದ ಎಲ್ಲಾ ರಾಜ್ಯಗಳ ಪ್ರಯಾಣ ಮುಂದುವರೆಸಲಿದ್ದಾರೆ.
ಎಪ್ರಿಲ್ 1 ರಂದು ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಹರಿಖಂಡಿಗೆ ಬಳಿಯ ಶೀರೂರು ಮೂಲ ಮಠದಿಂದ ಪೂಜಾ ಕೈಕಂರ್ಯಗಳನ್ನು ನೆರವೇರಿಸಿ ಪ್ರಯಾಣಕ್ಕೆ ಚಾಲನೆ ನೀಡಲಿದ್ದು, ನೇರವಾಗಿ ರಾಜಸ್ಥಾನದ ಕಡೆಗೆ ತಮ್ಮ ಪ್ರಯಾಣ ಬೆಳೆಸಲಿದ್ದಾರೆ.
ಇವರು ಸರಾಸರಿ 500 ಕಿ.ಮಿ. ಕ್ರಮಿಸಲಿದ್ದು, ಈ ನಡುವೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನಾವಧಿ, ಸಂಜೆಯ ಫಲಾಹಾರ ಹಾಗೂ ರಾತ್ರಿಯ ವಿರಾಮದ ಅವಧಿಯಲ್ಲಿ ಬೈಕ್ ರ‍್ಯಾಲಿಯ ಉದ್ದೇಶ, ಪರಿಸರ ಜನ ಜಾಗೃತಿ ಇವುಗಳ ಕುರಿತು ಮಾಹಿತಿಗಳನ್ನು ಆಯಾ ಆಯಾ ಪ್ರದೇಶಗಳ ಸ್ಥಳಿಯರಿಗೆ ನೀಡಲಿದ್ದಾರೆ.
ಕೆಲವೆಡೆಗಳಲ್ಲಿ ಪ್ರಯಾಣಿಸುವ ದೂರವನ್ನು ಕಡಿತಗೊಳಿಸಿ ಪ್ರಚಾರ ಹಾಗೂ ಜನಜಾಗೃತಿ ಸಭೆಗಳನ್ನು ಹೆಚ್ಚಿಸಲಿದ್ದು, ಒಟ್ಟಾರೆಯಾಗಿ ಎರಡು ತಿಂಗಳ ಕಾಲ ಮುಂಗಾರು ಮಳೆಗಾಲದ ಮುನ್ನ ಊರಿಗೆ ಆಗಮಿಸಲಿದ್ದಾರೆ.
ಪ್ರಚಾರಕ್ಕೆ ಸಿದ್ದವಾದ ಪರಿಕರಗಳು:
ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟಿಕ್ಕರ್ ಕರಪತ್ರಗಳನ್ನು ಮುದ್ರಿಸಲಾಗಿದೆ.
ನೇಪಾಳ, ಬಾಂಗ್ಲಾ ದೇಶ ಗಡಿ ಪ್ರದೇಶವಾದ ಡೌಕಿ ನದಿ ಚೈನಾ ಗಡಿಯ ನಾಥೂಲ ಪಾಸ್, ತಮಾಂಗ್, ಪಾಕಿಸ್ತಾನದ ಜೋಂಗವಾಲ ಗಡಿ, ಬರ್ಮ ಗಡಿಯ ಮೋನ್ ವಿಲೇಜ್, ಭೂತಾನ್ ಗಡಿಗು ತೆರಳಿ ಜನಜಾಗೃತಿ ಮೂಡಿಸಲಿದ್ದಾರೆ.
ದುಡಿಮೆಯ ಒಂದಿಷ್ಟು ಭಾಗ ಜನಜಾಗೃತಿಗಾಗಿ:
ನನ್ನ ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಆದಾಯವನ್ನು ಶೇಖರಿಸಿಟ್ಟು ಅದರ ಸಂಪಾದನೆಯಿಂದಲೇ ಈ ಬಾರಿಯ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದೇನೆ. ಎಂದು ಗುರುರಾಜ್ ನಾಯಕ್ ತಿಳಿಸಿದ್ದಾರೆ.