ಭೋಪಾಲ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಹೊಲವೊಂದರಲ್ಲಿ ಆಟವಾಡುತ್ತಿದ್ದ 2.5 ವರ್ಷದ ಮಗು 300 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದು, ಮಂಗಳವಾರ ಮಧ್ಯಾಹ್ನದಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೋರ್ವೆಲ್ನಲ್ಲಿ ಗಂಟೆಗಟ್ಟಲೆ ಸಿಲುಕಿರುವ ಮಗುವನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮುಂಗೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗು ಹೊಲದಲ್ಲಿ ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದಿದೆ. 50 ಅಡಿ ಕೆಳಗೆ ಬಿದ್ದಿರುವ ಮಗುವನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಸೆಹೋರ್ ಜಿಲ್ಲಾಧಿಕಾರಿ ಆಶಿಶ್ ತಿವಾರಿ ವಿಷಾದಕರ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೆಣ್ಣು ಮಗು 50 ಅಡಿಗಿಂತ ಹೆಚ್ಚು ಕೆಳಗೆ ಜಾರಿದೆ, ನಾವು ಅವಳಿಗೆ ಆಮ್ಲಜನಕವನ್ನು ನೀಡುತ್ತಿದ್ದೇವೆ. ಗಟ್ಟಿಯಾದ ಬಂಡೆಯಿಂದಾಗಿ ನಾವು ಕೊರೆಯಲು ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದಿರುವ ಅವರು ಕೊಳವೆಬಾವಿಯ ಪಕ್ಕದ ನೆಲವನ್ನು ನಿರಂತರವಾಗಿ ಕೊರೆಯಲಾಗುತ್ತಿದೆ ಎಂದಿದ್ದಾರೆ.