ಬ್ರಹ್ಮಾವರ: ಕಾರಣಿಕ ಕ್ಷೇತ್ರ ಕಚ್ಚೂರು ಶ್ರೀ ಮಲ್ತಿ ದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ವಾರ್ಷಿಕ ಜಾತ್ರೆ ಎ. 15ರಿಂದ 19ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಸಮರ್ಪಣೆ ಮಾಡುವುದು ಇಲ್ಲಿನ ವೈಶಿಷ್ಟ್ಯವಾಗಿದೆ.
ಎ.15 ರಂದು ಅಪರಾಹ್ನ 3ಕ್ಕೆ ಹೊರ ಕಾಣಿಕೆ ನಡೆಯಲಿದ್ದು, ವಿವಿಧ ಕಡೆಗಳಿಂದ ಬಂದ ಹಸಿರು ಹೊರ ಕಾಣಿಕೆಯನ್ನು ಬಾರ್ಕೂರು ಪೇಟೆಯಿಂದ ಮೆರವಣಿಗೆ ಮೂಲಕ ಶ್ರೀಕ್ಷೇತ್ರಕ್ಕೆ ಸಮರ್ಪಿಸಲಾಗುವುದು.
ಸಂಜೆ ವಿವಿಧ ಭಜನ ತಂಡಗಳಿಂದ ಭಕ್ತಿ ಹೆಜ್ಜೆ ಭಜನೆ, ಎ.16 ರಂದು ಬೆಳಿಗ್ಗೆ ದರ್ಶನ ಸೇವೆ, ಸಾಮೂಹಿಕ ಆಶ್ಲೇಷಾಬಲಿ, ಸಂಜೆ ದೀಪೋತ್ಸವ, ಬಲಿಮೂರ್ತಿ ಉತ್ಸವ, ಗೆಂಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ಮತ್ತು ಯಕ್ಷಗಾನ ಜರಗಲಿದೆ.
ಎ.17 ರಂದು ರಥೋತ್ಸವ ಮತ್ತು ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, 18 ರಂದು ತುಲಾಭಾರ ಸೇವೆ, 19 ರಂದು ಕೊರಗಜ್ಜ ದರ್ಶನ ನಡೆಯಲಿದೆ.
ಎ.17ರ ಬೆಳಿಗ್ಗೆ 11.30ಕ್ಕೆ ಜರಗುವ ಧಾರ್ಮಿಕ ಸಭೆಯಲ್ಲಿ ಚಿತ್ರದುರ್ಗ ಶ್ರೀ ಚಲವಾದಿ ಸಂಸ್ಥಾನ ಮಠದ ಶ್ರೀ ಬಸವನಾಗಿ ದೇವ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲ್ಲಿದ್ದು, ದೇವಸ್ಥಾನದ ಧರ್ಮದರ್ಶಿ ಗೋಕುಲ್ ದಾಸ್ ಉಪಸ್ಥಿತಿಯಲ್ಲಿ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಸಚಿವರು, ಸಂಸದರು, ಶಾಸಕರು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.