8ನೇ ಪರಿಚ್ಛೇದಕ್ಕೆ ಸೇರಿದ ಭಾಷೆಗೆ ಸಿಗಬಹುದಾದ ಪ್ರಯೋಜನಗಳನ್ನು ಸರಕಾರ ಕಡಿತಗೊಳಿಸುತ್ತಿದೆ: ಬಿಳಿಮಲೆ

ಉಡುಪಿ: ಸಂವಿಧಾನದ 8ನೇ ಪರಿಚ್ಛೇದಕ್ಕೆ ಒಂದು ಭಾಷೆ ಸೇರಿದರೆ, ಅದರಿಂದ ಸಿಗಬಹುದಾದ ಪ್ರಯೋಜಗಳನ್ನು ಸರ್ಕಾರ ಒಂದೊಂದಾಗಿ ಕಡಿತಗೊಳಿಸುತ್ತಿದೆ. ಒಂದು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿ ಗಟ್ಟಿಗೊಳಿಸುವ ಬದಲು ಅದನ್ನು ನಿರ್ಜಿವಗೊಳಿಸುವ ಪ್ರಯತ್ನ ಆಗುತ್ತಿದೆ. ವಾಜಪೇಯಿ ಪ್ರದಾನಿಯಾಗಿದ್ದಾಗ ತುಳು ಹೊರತುಪಡಿಸಿ ಉಳಿದ ನಾಲ್ಕು ಭಾಷೆಗಳನ್ನು ಮಾತ್ರ ಸೇರಿಸಲಾಯಿತು ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ, ಜಾನಪದ ತಜ್ಞ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ‌ ಮಾತನಾಡಿದರು.
ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತುಳು ಸೇರಿದಂತೆ ಐದು ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಡ ಹಾಕಲಾಯಿತು. ತುಳು ಭಾಷೆಯ ಅಂಗೀಕಾರಕ್ಕೆ ಬೇಕಾದ ಮಸೂದೆಯನ್ನು ತಯಾರಿಸಿ ಸಂಸತ್ತಿಗೆ ಕಳುಹಿಸಿಕೊಡಲಾಗಿತ್ತು.
ಆದರೆ ಸಂಸತ್ತಿನಲ್ಲಿ ತುಳುವಿನ ಪರವಾಗಿ ಮಾತನಾಡುವವರು ಯಾರು ಇರಲಿಲ್ಲ. ಕರ್ನಾಟಕದ 28 ಸಂಸದರ ಪೈಕಿ ಮಂಗಳೂರಿನ ಸಂಸದರು ಬಿಟ್ಟರೆ ಉಳಿದವರಿಗೆ ತುಳುವಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದು ನನ್ನ ರಾಜ್ಯದ ಭಾಷೆ ಎಂದು ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಮಾತನಾಡುವ ಚೈತನ್ಯವೂ ಅವರಿಗೆ ಇರಲಿಲ್ಲ. ಹಾಗಾಗಿ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಮಸೂದೆ ಬಿದ್ದು ಹೋಯಿತು ಎಂದರು.
ಡಾ. ಪುರುಷೋತ್ತಮ ಬಿಳಿಮಲೆಯವರನ್ನು ಅಭಿನಂದಿಸಿ ಮಾತನಾಡಿದ ಪ್ರೊ. ಯದುಪತಿ ಗೌಡ ಅವರು ಡಾ. ಬಿಳಿಮಲೆಯವರು ಪ್ರಾಧ್ಯಾಪಕರಾಗಿ ಹೊಸ ಅಧ್ಯಯನದ ಶಿಸ್ತನ್ನು ಬೆಳೆಸಿದವರು. ಸಂಶೋಧನಾ ಮಗ್ಗಲುಗಳನ್ನು ಇನ್ನಷ್ಟು ವಿಸ್ತಾರಗೊಳಿಸುವ ಜ್ಞಾನ ಸಂಪತ್ತು ಅವರಲ್ಲಿದೆ. ಯಕ್ಷಗಾನ, ಜನಪದ, ತುಳುಸಂಸ್ಕೃತಿ ಸೇರಿದಂತೆ ಅವರ ಅಧ್ಯಯನದ ಕ್ಷೇತ್ರಗಳೆಲ್ಲವು ಸ್ವಯಂ ಅನುಭವದ ಶಾಖೆಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಚ್. ಶಾಂತಾರಾಮ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ತುಳುವ ಇತಿಹಾಸ ಕುರಿತು ಡಾ. ನಿಕೇತನ ವಿಶೇಷ ಉಪನ್ಯಾಸ ನೀಡಿದರು. ಪ್ರಶಸ್ತಿ ಸಮಿತಿಯ ಸದಸ್ಯೆ ಡಾ. ಇಂದಿರಾ ಹೆಗ್ಡೆ ಪ್ರಸ್ತಾವನೆಗೈದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿ, ಪೃಥ್ವಿರಾಜ್ ಕವತ್ತಾರ್
ವಂದಿಸಿದರು. ವಿದ್ಯಾಲತಾ ಕಾರ್ಯಕ್ರಮ ನಿರೂಪಿಸಿದರು.