ಉಡುಪಿ: ಹೆಜಮಾಡಿ ಬಂದರು ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದಲ್ಲಿರುವ ಹೆಜಮಾಡಿ ಬಂದರು ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ. ಹೆಜಮಾಡಿ ಬಂದರು ಅಭಿವೃದ್ಧಿಗೆ 188 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಬಂದರಿನ ಭೂಸ್ವಾಧೀನ ಪ್ರಕ್ರಿಯೆ ಕುರಿತ ಸಮಾಲೋಚನಾ ಸಭೆಗೆ ತಿಳಿಸಲಾಯಿತು.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹೆಜಮಾಡಿ ಬಂದರು ಭೂಸ್ವಾಧೀನ ಪ್ರಕ್ರಿಯೆಗೆ ಇರುವ ಸಮಸ್ಯೆಗಳ ಕುರಿತು ಇಲಾಖಾಧಿಕಾರಿಗಳು ಸಂಸದರಿಗೆ ವಿವರಿಸಿದರು.

ಬಂದರಿನ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳು ಆರ್ಥಿಕ ಇಲಾಖೆಯಲ್ಲಿ ಮಂಜೂರಾತಿಗಾಗಿ ಇರುವ ಬಗ್ಗೆ ಮತ್ತು ಹೆಜಮಾಡಿ ಬಂದರಿನಲ್ಲಿ ಅನುಷ್ಠಾನಕ್ಕೆ ಬಾಕಿ ಇರುವ ಕಾಮಗಾರಿಗಳ ಬಗ್ಗೆ ಚರ್ಚಿಸಿ ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಕಂದಾಯ ಹಾಗೂ ಬಂದರು ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಸಹಾಯಕ ಆಯುಕ್ತೆ ರಶ್ಮಿ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕಂದಾಯ, ಬಂದರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮೀನುಗಾರಿಕಾ ಮುಖಂಡರು ಉಪಸ್ಥಿತರಿದ್ದರು.