ಉಡುಪಿ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಗ್ರೀನ್ ಆಸ್ಪತ್ರೆ ಯೋಜನೆ ಉದ್ಘಾಟನೆ.

ಉಡುಪಿ: ಗಿಡ ಮರಗಳನ್ನು ಬೆಳೆಸಿ ಪರಿಸರ ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಮಗೆ ಗಾಳಿ, ನೀರು, ಆಹಾರ, ಬೆಳಕು, ಆಮ್ಲಜನಕ ಇದು ಪರಿಸರದಲ್ಲಿ ಮಾತ್ರ ಸಿಗಲು ಸಾಧ್ಯ. ಆದುದರಿಂದ ಪ್ರತಿಯೊಂದು ಸಂಸ್ಥೆ ಮನೆಯ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಿಎಸ್‌ಐ, ಕೆಎಸ್‌ಡಿ ಬಿಷಪ್ ಹೇಮಚಂದ್ರ ಕುಮಾರ್ ಹೇಳಿದರು.

ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಗ್ರೀನ್ ಆಸ್ಪತ್ರೆ ಯೋಜನೆಯನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆಗಳಲ್ಲಿ ಉತ್ತಮ ಪರಿಸರವನ್ನು ರೋಗಿಗಳಿಗೆ ಕೊಟ್ಟಾಗ ಅವರು ಅತೀ ಶೀಘ್ರವಾಗಿ ರೋಗ ಮುಕ್ತರಾಗಲು ಸಾಧ್ಯವಾಗಬಹುದು. ರೋಗಿಗಳು ಆಸ್ಪತ್ರೆಗೆ ಬಂದಾಗ ಅದು ಸ್ವರ್ಗದಂತೆ ಕಾಣಬೇಕು ಎಂದರು.

ಡಿಎಚ್‌ಒ ಡಾ.ಈಶ್ವರ್ ಪಿ. ಗಡಾದ್
ಅವರು, ನಾವು ಈಗಾಗಲೇ ಪರಿಸರ ಉಳಿಸುವ ಬಗ್ಗೆ ಎಚ್ಚೆತ್ತುಕೊಳ್ಳದೆ ಹೋದರೆ ಮುಂದೊಂದು ದಿನ ಕಷ್ಟ ಅನುಭವಿಸ ಬೇಕಾಗುತ್ತದೆ. ಎಲ್ಲ ಕಚೇರಿಗಳಲ್ಲಿ ಪೇಪರ್ ರಹಿತ ಕೆಲಸ ಮಾಡಬೇಕು. ಆಗ ಮರ ಕಡಿಯುವುದು ಕಡಿಮೆಯಾಗಬಹುದು ಎಂದು ತಿಳಿಸಿದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಅಧ್ಯಕ್ಷತೆ ವಹಿಸಿದ್ದರು. ಸಿಎಸ್‌ಐ, ಕೆ ಎಸ್ ಡಿಯ ಉಡುಪಿ ವಲಯಾಧ್ಯಕ್ಷ ಐವನ್ ಡಿ’ಸೋನ್ಸ್ , ನಾಗಾಲ್ಯಾಂಡ್‌ನ ಸಂಗೀತಗಾರ ನೀಸೆ ಮೆರುನೊ, ಆಸ್ಪತ್ರೆಯ ಆಡಳಿತಾಧಿಕಾರಿ ದೀನಾ ಪ್ರಭಾವತಿ ಉಪಸ್ಥಿತರಿದ್ದರು. ಡಾ.ಬಿ.ಎನ್. ಪೆರಲಾಯ ಸ್ವಾಗತಿಸಿ, ಲಿಯೋನಾ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ರೋಹಿತ್ ಆರ್. ವಂದಿಸಿದರು.