ಉಡುಪಿ: ಪ್ರಸಕ್ತ ಸಾಲಿನಲ್ಲಿ ದೀನ್ ದಯಾಳ್ ಅಂತ್ಯೋದಯ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ವೈಯಕ್ತಿಕ ಹಾಗೂ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಜಿಲ್ಲೆಯ ಉಡುಪಿ ನಗರಸಭೆ, ಕಾರ್ಕಳ, ಕುಂದಾಪುರ ಹಾಗೂ ಕಾಪು ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಡೇ-ನಲ್ಡ್ ಅಭಿಯಾನದಡಿ ಸ್ವ-ಉದ್ಯೋಗ, ಗುಂಪು ಉದ್ಯೋಗ, ಗುಂಪುಗಳಿಗೆ ಬ್ಯಾಂಕ್ ಲಿಂಕೇಜ್, ಕೌಶಲ್ಯ ಉದ್ಯಮಶೀಲತೆ ತರಬೇತಿ, ಸ್ವ-ಸಹಾಯ ಗುಂಪುಗಳ ರಚನೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯಕ್ಕಾಗಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಉದ್ದೇಶಿತ ಚಟುವಟಿಕೆಗಳ ವಿವರ, ಯೋಜನಾ ವರದಿಯೊಂದಿಗೆ ಆದಾಯ ಜಾತಿ ಪ್ರಮಾಣ ಪತ್ರ/ತರಬೇತಿ ಅನುಭವ ಹೊಂದಿದ್ದಲ್ಲಿ ಪ್ರಮಾಣ ಪತ್ರ, ರೇಶನ್ ಕಾರ್ಡ್, ಆಧಾರ್ ಕಾರ್ಡ್, ವಿದ್ಯಾರ್ಹತೆ ಪ್ರಮಾಣ ಪತ್ರ, ಬ್ಯಾಂಕ್ ವೈಯಕ್ತಿಕ ಉಳಿತಾಯ ಖಾತೆ ಪುಸ್ತಕದ ಪ್ರತಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಿಶೇಷ ಚೇತನರಾಗಿದ್ದಲ್ಲಿ ದೃಢೀಕೃತ ಪ್ರಮಾಣಪತ್ರಗಳನ್ನು ದೃಢೀಕರಿಸಿದ ಪ್ರತಿಯೊಂದಿಗೆ ಅರ್ಜಿಯನ್ನು ಜೂನ್ 20 ರ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರ ಸ್ಥಳೀಯ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.