ಕಟಪಾಡಿ : ಕರಾವಳಿಯ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಮತ್ತು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ವಾರ್ಷಿಕೋತ್ಸವ ಕಾಳಿಕಾಂಬ ವಿಶ್ವಕರ್ಮೇಶ್ವರ ಸಭಾಭವನ ಅಗ್ರಹಾರ ಕಟಪಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಯುಕೆ ಅಂಡ್ ಕೋ ಕಂಪನಿ ಇದರ ಸ್ಥಾಪಕರಾದ ಕೆ. ಉಲ್ಲಾಸ್ ಕಾಮತ್ ಭಾಗವಹಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸಿ ಸ್ವಂತ ಉದ್ಯೋಗವನ್ನು ನೀಡುವವರಾಗಬೇಕು. ಹೊಸ ಯೋಜನೆ ಕಠಿಣ ನಿರ್ಧಾರಗಳಿಂದ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು. ಇವೆಲ್ಲದಕ್ಕೂ ಅವರು ಅಳವಡಿಸಿಕೊಂಡ ಕೌಶಲ್ಯಗಳೇ ದಾರಿ ತೋರಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ವಹಿಸಿ ವೇದಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಸಿದ್ಧಾಂತ್ ಪೌಂಡೇಶನ್ ನ ಟ್ರಸ್ಟಿಯಾದ ನಮಿತಾ ಜಿ ಭಟ್ , ರಾಮ್ ಪ್ರಭು , ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್ ನ ಪ್ರಾಂಶುಪಾಲರಾದ ಪ್ರೊಫೆಸರ್ ನಾರಾಯಣ್ ರಾವ್ , ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ವಿಘ್ನೇಶ್ ಶೆಣೈ ಉಪಸ್ತಿತರಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ನಿಧಿ ಎನ್ ಪೈ ಸ್ವಾಗತಿಸಿ, ಪ್ರೊ. ರೆನಿಟಾ ವಂದಿಸಿದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಂತಿಮ ಬಿಕಾಂನ ವಿದ್ಯಾರ್ಥಿಗಳಾದ ಸುಹಾನ್ ಶೆಟ್ಟಿ ಮತ್ತು ಲೆರಿನಾ ನಿರೂಪಿಸಿದರು.