ಮಂಗಳೂರು: ಮಂಗಳೂರು ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳೂರು ನ್ಯಾಯಾಲಯದ ಸಂಕೀರ್ಣದ ಹಳೆ ಜಿಲ್ಲಾ ಮುಖ್ಯ ನ್ಯಾಯಾಲಯದ ಕಟ್ಟಡದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ನ್ಯಾಯವಾದಿ ಶಂಕರ್ ಭಟ್ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, 125ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಮಂಗಳೂರು ವಕೀಲರ ಸಂಘಕ್ಕೆ ರಾಜ್ಯ ಹೊರ ರಾಜ್ಯದಲ್ಲೂ ಬಹುಮಾನ್ಯತೆ ಹೊಂದಿದೆ. ಇಲ್ಲಿನ ಅನೇಕ ವಕೀಲರು ಹೈಕೋರ್ಟ್, ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ವಿವಿಧೆಡೆ ಕೋರ್ಟ್ ಗಳಲ್ಲಿ ಸೇವೆ ಸಲ್ಲಿಸಿದ್ದು, ಜಿಲ್ಲೆಗೆ ಹೆಸರು ತಂದಿದ್ದಾರೆ. ಇಂತಹ ವಕೀಲರ ಸಂಘದಲ್ಲಿ ನಾವು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಮುಂದಿನ ದಿನಗಳಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ಹಿರಿಯರಿಗೆ ಮನ್ನಣೆ ನೀಡಿ ಅವಿರೋಧ ಆಯ್ಕೆ ಮಾಡುವತ್ತ ವಕೀಲರು ಗಮನಹರಿಸಬೇಕಿದೆ ಎಂದರು.
ಸಂಘ ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಣೆ ಮಾಡುವಂತಾಗಬೇಕು. ಹಳೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯ ಕಾರ್ಯನಿರ್ವಹಿಸಿದ್ದ ಹೆರಿಟೇಜ್ ಕಟ್ಟಡವನ್ನು ಮಂಗಳೂರು ವಕೀಲರ ಸಂಘದ ಕಚೇರಿಯನ್ನಾಗಿ ಮಾಡಲು ಸೂಕ್ತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಆರ್. ಬಳ್ಳಾಲ್ ತಮ್ಮ ಅಧ್ಯಕ್ಷತೆ ವಹಿಸಿ ಜವಾಬ್ದಾರಿಯನ್ನು ನೂತನವಾಗಿ ಆಯ್ಕೆಯಾದ ನರಸಿಂಹ ಹೆಗ್ಡೆ ಅವರಿಗೆ ಹಸ್ತಾಂತರಿಸಿದರು. ಪದಾಧಿಕಾರಿಗಳೂ ಈ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ಸ್ವೀಕರಿಸಿ ವಕೀಲರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಪಣತೊಟ್ಟರು.
ಉಪಾಧ್ಯಕ್ಷರಾಗಿ ಜಿನೇಂದ್ರ ಕುಮಾರ್, ಕಾರ್ಯದರ್ಶಿಯಾಗಿ ಎಚ್.ವಿ. ರಾಘವೇಂದ್ರ, ಖಜಾಂಚಿಯಾಗಿ ಅರುಣಾ, ಜೊತೆ ಕಾರ್ಯದರ್ಶಿಯಾಗಿ ಶರ್ಮಿಳಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರೂ ನಿಕಟಪೂರ್ವ ಅಧ್ಯಕ್ಷರಿಂದ ಅಧಿಕಾರ ಸ್ವೀಕರಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ವಿಕ್ರಮ್ ಕಾರ್ಯಕ್ರಮ ನಿರೂಪಿಸಿದರೆ, ಸಂಘದ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ವಂದಿಸಿದರು.