ಉಡುಪಿ: ನಿಸ್ವಾರ್ಥ ಸೇವೆ ಮಾಡಿದರೆ ನಮಗೆ ಹೇಗಾದರೂ ಪ್ರತಿಫಲ ಸಿಗುತ್ತದೆ. ಸಮಾಜ ಸೇವೆಗೆ ಸಮಾಜ ಸೇವಕನೇ ಆಗಬೇಕಾಗಿಲ್ಲ. ಸಹಾಯ ಮಾಡುವ ಮನಸ್ಸಿದ್ದರೆ ಸಾಕು. ಕಷ್ಟಕ್ಕೆ ಮಿಡಿಯುವ ಹೃದಯವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಹೇಳಿದರು.
ಬಿಯಿಂಗ್ ಸೋಶಿಯಲ್ ವತಿಯಿಂದ ಶ್ರೀ ತ್ರಿಕಣ್ಣೇಶ್ವರೀವಾಣಿ ಕನ್ನಡ ಮಾಸ ಪತ್ರಿಕೆಯ ಸಹಭಾಗಿತ್ವದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ ಕೂತು ಮಾತನಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೋವಲ್ಲಿರುವವರ ಕಣ್ಣೀರು ಒರೆಸುವುದೇ ನನ್ನ ಸುಖ ನಾನು ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡವ, ತಂದೆ ಸತ್ತಾಗ ತಾಯಿ ಬೊಬ್ಬೆ ಹಾಕಿ ಅತ್ತಿದ್ದರು. ಆ ಒಂದು ಕೂಗು ನನ್ನ ಜೀವನ ಪರಿವರ್ತಿಸಿತು. ಈಗ ನೋವಿನ ಕೂಗು, ಕಷ್ಟದಲ್ಲಿದ್ದವರ ಅಳು ಕೇಳಿದಲ್ಲಿ ನಾನು ಓಡಿ ಹೋಗುತ್ತೇನೆ. ಕಷ್ಟ ಬಂದಾಗ ಎದುರಿಸುವ ಶಕ್ತಿಯನ್ನು ತಂದೆತಾಯಿ ಕೊಡಬೇಕು. ಶಿಕ್ಷಕರು ಧಾರೆ ಎರೆಯಬೇಕು. ಮನುಷ್ಯ ಒಂದೊಂದು ಸುಖಕ್ಕಾಗಿ ಅಪೇಕ್ಷೆ ಪಡುತ್ತಾನೆ. ಅದಕ್ಕಾಗಿ ಜೀವನದಲ್ಲಿ ಓಡುತ್ತಾನೆ, ಹಾತೊರೆಯುತ್ತಾನೆ. ನನಗೆ ಕಷ್ಟದಲ್ಲಿರುವವರ ಮುಖದಲ್ಲಿ ನಗು ನೋಡುವುದು, ನೋವಲ್ಲಿರುವವರ ಕಣ್ಣೀರು ಒರೆಸುವುದೇ ನನ್ನ ಸುಖ ಸಮಾಜ ಸೇವಕ ಎಂದರು.
ಡಿವೈಎಸ್ಪಿ ಜೈ ಶಂಕರ್ ಮಾತನಾಡಿ, ವಿಶು ಶೆಟ್ಟಿ ಅವರದ್ದು ಪ್ರತಿಫಲಾಪೇಕ್ಷೆ ರಹಿತ ಸೇವೆ. ಅವರ ಸೇವೆ ಇಂದಿನ ಯುವಜನರಿಗೆ ಮಾದರಿಯಾಗಬೇಕು ಎಂದರು. ಹ್ಯೂಮ್ಯಾನಿಟಿ ಟ್ರಸ್ಟ್ ನಿರ್ಮಾಣದ ವಿಶು ಶೆಟ್ಟಿ ಕುರಿತ ಸಾಕ್ಷ್ಯಚಿತ್ರವನ್ನು ಬೀಡಿನಗುಡ್ಡೆ ರೂದ್ರಭೂಮಿ ನಿರ್ವಾಹಕಿ ವನಜಾ ಪೂಜಾರಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಶ್ರೀ ತ್ರಿಕಣ್ಣೇಶ್ವರೀವಾಣಿ ಪತ್ರಿಕೆಯ ಸಂಪಾದಕ ತೇಜೇಶ್ವರ ರಾವ್, ಸಾಲಿಗ್ರಾಮ ಡಾ.ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಸ್ಥಾಪಕಿ ಬಿ. ಮಾಲಿನಿ ಮಲ್ಯ, ಹ್ಯೂಮ್ಯಾನಿಟಿ ಟ್ರಸ್ಟ್ನ ಸಂಸ್ಥಾಪಕ ರೋಶನ್ ಬೆಳ್ಮಣ್, ಹರೀಶ್ ಕಿರಣ್ ತುಂಗಾ ಉಪಸ್ಥಿತರಿದ್ದರು.
ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಸಾಮಾಜಮುಖಿ ಸೇವೆ ಸಲ್ಲಿಸುತ್ತಿರುವ ಹೆಬ್ರಿಯ ಡಾ. ರಾಮಚಂದ್ರ ಐತಾಳ್ ಹಾಗೂ ಡಾ. ಭಾರ್ಗವಿ ಐತಾಳ್ ದಂಪತಿಗಳನ್ನು ಗೌರವಿಸಲಾಯಿತು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.