ಬೆಂಗಳೂರು: ವೇಗವಾಗಿ ಬಂದ ಕಾರೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಬೆಂಗಳೂರು-ಮಾಗಡಿ ರಸ್ತೆಯ ತಾವರೆಕೆರೆ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಶನಿವಾರ ಸಂಜೆ ಘಟನೆ ನಡೆದಿದ್ದು, ಬಾಲಕಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ರಾತ್ರಿ 7.15 ರ ಸುಮಾರಿಗೆ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಬಾಲಕಿಯನ್ನು ತಾವರೆಕೆರೆಯ ನಾಗನಹಳ್ಳಿ ನಿವಾಸಿ ಪಿ ಕುಶ್ಮಿತಾ (4) ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಸೋದರ ಸಂಬಂಧಿ ವೇದಾಂತ್’ಗೆ ಚಿಕಿತ್ಸೆ ಮುಂದುವರೆದಿದೆ. ಕಾರು ಚಾಲಕ ಬೆಂಗಳೂರು ಮೂಲದವನಾಗಿದ್ದು, ತಾಯಿಯೊಂದಿಗೆ ಹಳ್ಳಿಯಲ್ಲಿರುವ ತೋಟದ ಮನೆಗೆ ಬಂದಿದ್ದಾನೆ. ಅಪಘಾತದ ನಂತರ ಇಬ್ಬರೂ ಸ್ಥಳದಲ್ಲಿಯೇ ಇದ್ದರು. 15 ದಿನಗಳಲ್ಲಿ ಚಾಲಕನ ಮದುವೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.