ಉಡುಪಿ: ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರವು ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿರುವ ‘ಹಸಿರು ಕಲ್ಯಾಣದತ್ತ ನಮ್ಮ ನಡೆ ಪಚ್ಚೆವನ ಸಿರಿ ಅಭಿಯಾನದ ಉದ್ಘಾಟನೆ ಹಾಗೂ ವಿಚಾರ ಸಂಕಿರಣ ಆ.4ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮ ಅಂದು ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಕಲ್ಬರಹದಿಂದ ತಾಡೋಲೆಗೆ:
ಕೊರೆದು ಬರೆದ ಆರ್ಕೈವ್ಸ್ ಪ್ರತಿ ಹಾಗೂ ಶಾಸನಗಳ ಪಡಿಅಚ್ಚು ಬಿಡುಗಡೆ ಮಾಡಲಾಗುವುದು. ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡುವರು. ಪಚ್ಚೆವನ ಭಾರತ ದರ್ಶನ, ಜೈವಿಕ ಪರಿಸರ ಅಧ್ಯಯನ ಮಹಾಒಕ್ಕೂಟ ಹಾಗೂ ಪೂರ್ಣ ಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
‘ಶ್ರೀತಾಳೆ ಬೀಜ–ಕಾಯಿಗಳಲ್ಲಿ ಆರೋಗ್ಯವರ್ಧನೆ ಮತ್ತು ದ್ಯವ್ಯಗುಣಗಳು’ ಹಾಗೂ ಶಾಸನಗಳಲ್ಲಿ ತೋಪು–ತಾಳವನ ಅಂದು, ಇಂದು ಮತ್ತು ನಾಳೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಕೇಂದ್ರದ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ತುಳು 8ನೇ ಪರಿಚ್ಛೇದ ಸೇರ್ಪಡೆಗೆ ಆಕರಗಳ–ಶಾಸನಗಳ ದಾಖಲೆಗಳ ದತ್ತಕ ಸಂಪದವನ್ನು ಹಸ್ತಾಂತರ
ಮಾಡಲಾಗುವುದು ಎಂದರು.
ನಾಟಿ ವೈದ್ಯ ಕಟಪಾಡಿ ಸತೀಶ್ ಅವರಿಗೆ ಪ್ರಾಚ್ಯವೈದ್ಯಶ್ರೀ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಲ್ಲದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮಚಂದ್ರ, ಎ. ರಾಘವೇಂದ್ರ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಡಾ. ನಿಕೇತನ, ನಾರಾಯಣ ಶೆಟ್ಟಿ, ಎಂ.ಜಿ.
ವಿಜಯ, ನೀಲಾವರ ಸುರೇಂದ್ರ ಅಡಿಗ, ಕನರಾಡಿ ವಾದಿರಾಜ ಭಟ್, ವಿ.ಜಿ. ಶೆಟ್ಟಿ, ಶ್ರೀಕಾಂತ ಶೆಟ್ಟಿ ಮತ್ತು ಶ್ರೀನಿವಾಸ ರಾವ್ ಅವರಿಗೆ ಪಚ್ಚೆವನಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕನಕ ಕಣಜದ ಗೌರವ ನಿರ್ದೇಶಕಿ ರುಕ್ಮಿಣಿ ಹಂಡೆ, ಇತಿಹಾಸ ಸಂಶೋಧಕ ಶ್ರೀಧರ ಭಟ್ ಇದ್ದರು.