ಉಡುಪಿ, ಅಗಸ್ಟ್ 2: ಸರಕಾರದ ವಿವಿಧ ಇಲಾಖೆಗಳು ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸೇವೆಗಳು ಸೇರಿದಂತೆ, ಒಟ್ಟು 960 ಸೇವೆಗಳನ್ನು ಒಳಗೊಂಡ ಸಕಾಲ ಸೇವೆಯ ಅನುಷ್ಠಾನದ ಪ್ರಗತಿ ಕುರಿತು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸೋಮವಾರ ವಿವಿಧ ಜಿಲ್ಲಾಡಳಿತಗಳೊಂದಿಗೆ, ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಸಕಾಲ ನೋಡೆಲ್ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಕಾಲ ಅರ್ಜಿಗಳ ತ್ವರಿತ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಕಾಲ ಸೇವೆಗಳಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಅರ್ಜಿಗಳ ವಿಲೇವಾರಿ ವರದಿಯನ್ನು ಸಕಾಲ ಪೋರ್ಟಲ್ನಲ್ಲಿ ಪ್ರತಿದಿನ ಅಪ್ಡೇಟ್ ಮಾಡಬೇಕು. ಪ್ರತೀ 15 ದಿನಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು, ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಸಕಾಲ ಅರ್ಜಿ ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡುವ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ಶೋಕಾಸ್ ನೋಟೀಸ್ ನೀಡುವ ಎಚ್ಚರಿಕೆಯನ್ನು ನೀಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಕಾಲ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೇ ಸಮರ್ಪಕವಾಗಿ ವಿಲೇವಾರಿ ಮಾಡುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲಾ ಇಲಾಖೆಗಳು ಸಕಾಲದಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಬೇಕು, ಈ ಕುರಿತಂತೆ ನೋಡೆಲ್ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು, ಎಲ್ಲಾ ನೋಡೆಲ್ ಅಧಿಕಾರಿಗಳು ತಮ್ಮ ಕೆಜಿಐಡಿ ಸಂಖ್ಯೆಯನ್ನು ಸಕಾಲ ಪೋರ್ಟೆಲ್ನಲ್ಲಿ ಅಳವಡಿಸಬೇಕು, ಈ ಸಂಖ್ಯೆಯು ನೋಡೆಲ್ ಅಧಿಕಾರಿಗಳ ವೇತನಕ್ಕೆ ತಾಳೆಯಾಗಲಿದ್ದು, ನಿಗಧಿತ ಅವಧಿಯಲ್ಲಿ ಸೇವೆ ಸಕಾಲ ಸೇವೆ ನೀಡಿದ ಅಧಿಕಾರಿಗಳಿಗೆ ವಿಧಿಸುವ ದಂಡವನ್ನು ನೇರವಾಗಿ ಅವರ ವೇತನದಿಂದಲೇ ಕಡಿತಗೊಳಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು
ಸಕಾಲದಲ್ಲಿ ಸಲ್ಲಿಸಲಾದ ಅರ್ಜಿಗಳ ವಿಲೇವಾರಿ ಕುರಿತಂತೆ ಶೀಘ್ರದಲ್ಲಿ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಲಿರುವುದರಿಂದ ಆದಷ್ಟು ಬೇಗ ಕಾರ್ಯ ಸ್ಥಿತಿಯನ್ನು ಅಪ್ಡೇಟ್ ಮಾಡುವಂತೆ ಸೂಚಿಸಿದರು.
ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸೇವೆ ಒದಗಿಸುವ ಸಲುವಾಗಿ ಕರ್ನಾಟಕ ಸಕಾಲ ಸೇವೆ ಅಧಿನಿಯಮ ಜಾರಿಗೆ ತರಲಾಗಿದ್ದು, ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸೇವೆಗಳ ಕುರಿತು ತಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಒದಗಿಸುವ ಕಾರ್ಯ ಮಾಡಬೇಕು.
ಸಕಾಲ ಸೇವೆಯ ಸಮಸ್ಯೆ, ಗೊಂದಲಗಳ ಪರಿಹಾರಕ್ಕೆ ರಾಜ್ಯಮಟ್ಟದ ಸಕಾಲ ವಾಟ್ಸ್ಆಪ್ ಗ್ರೂಪ್ ರಚಿಸಲಾಗಿದ್ದು, ಈ ವಾಟ್ಸ್ಅಪ್ ಗ್ರೂಪ್ನಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಓ, ಅಪರ ಜಿಲ್ಲಾಧಿಕಾರಿಗಳು, ಸಕಾಲ ಮಾಹಿತಿಗಳು, ಅರ್ಜಿಗಳ ಇತ್ಯರ್ಥ, ಅರ್ಜಿ ವಿಲೇವಾರಿಗಳು, ಸಮಸ್ಯೆಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಒಬ್ಬ ವಿಶೇಷ ಅಧಿಕಾರಿಯನ್ನು ಅಡ್ಮಿನ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲೆಯ ವಿವಿಧ ಇಲಾಖೆಯ ಸಕಾಲ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.