ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ಎಂ.ಪಿ.ಎಂ ಕಾಲೇಜಿನಲ್ಲಿ ಮೇ.16 ರಂದು ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ. ಪಿ. ಎಂ. ನ ಹಳೆ ವಿದ್ಯಾರ್ಥಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸುರೇಶ್ ಅತ್ತೂರ್ ಇವರು ಮಾತನಾಡಿ , ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ಒಂದು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇದು ನಮ್ಮ ಕಾಲೇಜಿಗೆ ಉತ್ತಮ ಹೆಸರನ್ನು ತಂದುಕೊಟ್ಟಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ವೀಕ್ಷಕರು ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಪ್ರಕಾಶ್ ಡಿಸೋಜಾ ಇವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಾತ್ರವಲ್ಲದೇ ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು . ಕ್ರೀಡೆಯು ನಮ್ಮ ಮಾನಸಿಕ ಸ್ಟೈರ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣ್ ಎಂ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ,ಕಾಲೇಜಿನ ಹಳೆ ವಿದ್ಯಾರ್ಥಿ ರಾಜೇಶ್, ಕಾಲೇಜಿನ ಕ್ರೀಡಾ ಕಾರ್ಯದರ್ಶಿ ವಿನ್ಯಾಸ್ ಉಪಸ್ಥಿತರಿದ್ದರು.
ಕಾಲೇಜಿನ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ಅಂತರ್ ಕಾಲೇಜಿನ ಉಪನ್ಯಾಸಕರು ಮತ್ತು ಆಟಗಾರರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಅಕ್ಷತಾ ರಾವ್ ನಿರೂಪಿಸಿ, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಸಹ ಪ್ರಾಧ್ಯಾಪಕ ಡಾ. ವಿದ್ಯಾಧರ ಹೆಗ್ಡೆ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಯಭಾರತಿ ಎ. ವಂದಿಸಿದರು.