ಕಲೆ ಎನ್ನುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ.ಅದು ಆಸಕ್ತಿಯಿಂದ, ಸತತ ಪರಿಶ್ರಮದಿಂದ ನಮ್ಮಲ್ಲಿ ಹುಟ್ಟಿಕೊಂಡರೆ ಮಾತ್ರ ಅದನ್ನು ಲೋಕಕ್ಕೆ ತೆರೆದಿಡಲು ಸಾಧ್ಯ. ಚಿತ್ರಕಲೆಯೂ ಸಾಮಾನ್ಯವಾದುದಲ್ಲ. ಕಲ್ಪನೆಯಲ್ಲಿದ್ದದ್ದನ್ನು ಕಾಗದದಲ್ಲೋ, ಗೋಡೆಯಲ್ಲೋ ಬಣ್ಣದೊಂದಿಗೆ ಮೂಡಿಸುವ ಪ್ರತಿಭೆಗೆ ಅದರದ್ದೇ ಆದ ಘನತೆ ಇದೆ. ಇಲ್ಲೊಬ್ಬ ಗ್ರಾಮೀಣ ಭಾಗದ ಯುವಕನಿದ್ದಾನೆ. ಚಿತ್ರಕಲೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಅನ್ನಿಸಿಕೊಂಡು ಕಲೆಯನ್ನು ತನ್ನ ಬದುಕಿನ ಭಾಗವಾಗಿಸಿಕೊಂಡ ಈ ಯುವಕ ತಾನು ಮಾಡುವ ಚೆಂದ ಚೆಂದದ ಚಿತ್ರಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ಚಿತ್ರಕಲೆಯ ಅಪ್ಪಟ ಪ್ರತಿಭೆಯೇ ಬೈಲೂರಿನ ನಿಖಿತ್ ಆಚಾರ್ಯ, ಕಾಂತರಗೋಳಿ.
ಸೆಳೆಯುವ ಹುಡುಗನ ಬಣ್ಣದ ಬದುಕು: ತೈಲ ಚಿತ್ರ, ಮರದ ಕೆತ್ತನೆ, ಪೇಪರ್ ಕ್ರಾಫ್ಟ್, ವಾಲ್ ಪೈಟಿಂಗ್, ಮೈಕ್ರೋ ಆರ್ಟ್, ಪೆನ್ಸಿಲ್ ಸ್ಕೆಚ್ಚ್, ಕ್ರೇವಿಂಗ್ ಆರ್ಟ್ ಹಾಗೂ ಇನ್ನಿತರ ವಿಭಾಗಗಳಲ್ಲಿ ತನ್ನದೇ ಆದ ಕಲ್ಪನೆಯಲ್ಲಿ, ಸ್ವಂತಿಕೆಯಲ್ಲಿ ಅರಳುತ್ತಿರುವ ನಿಖಿತ್ ಆಚಾರ್ಯ ಅವರಿಗೆ ಚಿತ್ರ ಬಿಡಿಸೋದು ಅಂದ್ರೆ ಪಂಚಪ್ರಾಣ. ಪ್ರಸ್ತುತ ಮಣಿಪಾಲದ ಟಿ.ಎಂ.ಎ.ಪೈ ಸಂಸ್ಥೆಯಲ್ಲಿ ಡಿಪ್ಲೋಮಾ ಸಿವಿಲ್ ಶಿಕ್ಷಣ ಪಡೆಯುತ್ತಿರುವ ಈ ಯುವ ಕಲಾವಿದನಿಗೆ ಚಿತ್ರಕಲೆ ಎಂದರೆ ಅದೊಂದು ವ್ಯವಹಾರಿಕ ಸರಕಲ್ಲ. ಕ್ರಿಯಾಶೀಲತೆ ಮತ್ತು ಆಸಕ್ತಿಯ ಕ್ಷೇತ್ರ, ಯಾರಾದರೂ ಗೆಳೆಯರು ಕೇಳಿದರೆ ಒಂದಷ್ಟು ಚಿತ್ರ ಮಾಡಿ ಕೊಡುವ ನಿಖಿತ್ ಗೆ ಕಲೆ ಎಂದರೆ ಪ್ರೀತಿಯ ಸೆಲೆ. ಕಲೆಯ ಬಗ್ಗೆ ಯಾರೇ ಕೇಳಿದರೂ ತನಗೆ ಗೊತ್ತಿದ್ದಷ್ಟು ಹೇಳಿಕೊಡುವ ಇವರಿಗೆ ತನ್ನ ಜೊತೆ ಇತರರೂ ಬೆಳೆಯಬೇಕೆನ್ನುವ ಕಾಳಜಿ ಇದೆ.
“ಎಲ್ಲಾ ಬಗೆಯ ಚಿತ್ರಗಳನ್ನು ಮಾಡುತ್ತೇನೆ. ಚಿತ್ರಕಲೆಯ ಬಗ್ಗೆ ನಂಗೆ ಬಾಲ್ಯದಿಂದಲೂ ಅಪಾರ ಆಸಕ್ತಿ ಇದ್ದುದರಿಂದ ಈಗಲೂ ಅದನ್ನು ಬಿಟ್ಟಿಲ್ಲ. ಕಾಲೇಜಿನ ಓದಿನ ನಡುವೆ ಸಮಯ ಸಿಕ್ಕಾಗೆಲ್ಲಾ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತೇನೆ”ಎನ್ನುತ್ತಾರೆ ನಿಖಿತ್. ಕಲೆಯಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಆಕಾಂಕ್ಷೆ ಇರುವ ನಿಖಿತ್ ಅನ್ನೋ ಕನಸುಕಂಗಳ ಹುಡುಗನಿಗೆ ಉಡುಪಿ Xpress ನಿಂದ ಪ್ರೀತಿಯ ಹಾರೈಕೆ. ನಿಖಿತ್ ಸಂಪರ್ಕ:6363 760 321 ಚಾಕ್ ನಿಂದ ನಿಖಿತ್ ಮಾಡುವ ಚಂದದ ಕಲಾಕೃತಿಯ ವಿಡಿಯೋ ಇಲ್ಲಿದೆ ನೋಡಿ: