ಉಡುಪಿ: ನಗರದ ನಿಟ್ಟೂರು ಪ್ರೌಢಶಾಲೆಯಲ್ಲಿ ಎಲ್.ಪಿ.ಜಿ. ಗ್ಯಾಸ್ ಸೌಲಭ್ಯವಿಲ್ಲದ ವಿದ್ಯಾರ್ಥಿಗಳಿಗೆ ಉಚಿತವಾಗಿ ಗ್ಯಾಸ್ ಸೌಲಭ್ಯ ಒದಗಿಸುವ ವಿಶಿಷ್ಟ ಕಾರ್ಯಕ್ರಮ ಗುರುವಾರ ಶಾಸಕ ಕೆ. ರಘುಪತಿ ಭಟ್ ಅವರ ಆಧ್ಯಕ್ಷತೆಯಲ್ಲಿ ಜರಗಿತು.
ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಗ್ಯಾಸ್ ಸಂಪರ್ಕ ಸೌಲಭ್ಯವನ್ನು ವಿತರಿಸಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುತ್ತಿರುವ ಶಾಲಾ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು.
ಈ ವರ್ಷ ಒಟ್ಟು 20 ವಿದ್ಯಾರ್ಥಿಗಳಿಗೆ ಗ್ಯಾಸ್ ಸೌಲಭ್ಯ ಒದಗಿಸಲಾಗಿದೆ. 10 ವಿದ್ಯಾರ್ಥಿಗಳ ಮನೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ, ಉಳಿದ 10 ವಿದ್ಯಾರ್ಥಿಗಳಿಗೆ ಶಾಲಾ ಸಂಚಿಯಿಕಾ ಬ್ಯಾಂಕ್ ನ ಲಾಭಾಂಶದಿಂದ ಒದಗಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆ ಜಾರಿಯಲ್ಲಿದ್ದು, ಈವರೆಗೆ 48 ವಿದ್ಯಾರ್ಥಿಗಳು ಸೌಲಭ್ಯ ಪಡೆದಿದ್ದಾರೆ.