ಉಡುಪಿ: ಕೃಷ್ಣನ ನಾಡಿನಲ್ಲಿರುವ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂಭ್ರಮ ಆ. 23ರಂದು ಮತ್ತು ವಿಟ್ಲಪಿಂಡಿ (ಮೊಸರುಕುಡಿಕೆ) ಉತ್ಸವ ಆ. 24ರಂದು ಜರುಗಲಿದೆ.ಎರಡೂ ದಿನವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಿಂದ ನಡೆಯಲಿದೆ.ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಏನೇನು ಸಾಂಸ್ಕೃತಿಕ ಕಾರ್ಯಕ್ರಮ?
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ. 18ರ ರಾತ್ರಿ ಶಮಾ ಕೃಷ್ಣ ಮತ್ತು ಶ್ರದ್ಧಾನೃತ್ಯ ತಂಡದಿಂದ ಸರ್ವಂ ಕೃಷ್ಣಮಯಂ ನೃತ್ಯರೂಪಕ, ಆ. 19ರಂದು ಫಯಾಜ್ ಖಾನ್ ಅವರಿಂದ ಭಕ್ತಿ ಸಂಗೀತ, ಆ. 20 ರಂದು ಚೆನ್ನೈ ಟಿ.ವಿ. ಶಂಕರನಾರಾಯಣರಿಂದ ಕರ್ಣಾಟಕ ಸಂಗೀತ, ಆ. 21ರಂದು ಚೆನ್ನೈಯ ಕೆ.ಜೆ. ದಿಲೀಪ್ ಮತ್ತು ಸಂಗೀತಾ ದಿಲೀಪ್ ಅವರಿಂದ ದ್ವಂದ್ವ ಪಿಟೀಲು ವಾದನ, ಆ. 22ರಂದು ಮುದ್ದುಮೋಹನ್ ಅವರಿಂದ ಹಿಂದೂಸ್ತಾನೀ ಭಕ್ತಿ ಸಂಗೀತ, ಆ. 23ರಂದು ರಾಜಕಮಲ್ ನಾಗರಾಜ್ ಮತ್ತು ಸಮೀರ್ ರಾವ್ ಅವರಿಂದ ಕರ್ಣಾಟಕ ಮತ್ತು ಹಿಂದೂಸ್ಥಾನಿ ಕೊಳಲು ಜುಗಲ್ಬಂದಿ, ಆ. 25ರಂದು ಎಚ್.ಎಲ್. ಶಿವಶಂಕರ ಸ್ವಾಮಿ ಅವರಿಂದ ತಾಳವಾದ್ಯ ಕಛೇರಿ ನಡೆಯಲಿದೆ.
ಜಯಂತಿ ಅಲ್ಲ ಜನ್ಮಾಷ್ಟಮಿ:
ಈ ಬಾರಿ ಆಚರಣೆಯಲ್ಲಿ ಕೆಲವೊಂದು ಗೊಂದಲಗಳಿವೆ. ರೋಹಿಣಿ ನಕ್ಷತ್ರ ಬಾರದ ಕಾರಣ ಶ್ರೀಕೃಷ್ಣ ಜಯಂತಿ ಎಂದು ಇದನ್ನು ಕರೆಯಲಾಗುವುದಿಲ್ಲ ಬದಲಾಗಿ ಶ್ರೀಕೃಷ್ಣಾಷ್ಟಮಿ ಎಂದು ಕರೆಯಬೇಕು. ರಾತ್ರಿ ಅಷ್ಟಮಿ ತಿಥಿ ಬರುತ್ತಿದೆ. ಅಷ್ಟಮಿ ತಿಥಿ ರಾತ್ರಿ ಸಿಗುವ ಆ. 23ರಂದೇ ಕೃಷ್ಣಾಷ್ಟಮಿ ಆಚರಣೆ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಏನೇನು ಸ್ಪರ್ಧೆಗಳು?
ಆ. 3ರ ಅಪರಾಹ್ನ 3ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಆ. 4ರ ಬೆಳಗ್ಗೆ 1ರಿಂದ 10ನೆಯ ತರಗತಿ ವರೆಗೆ ಭಕ್ತಿ ಸಂಗೀತ ಸ್ಪರ್ಧೆ, ಆ. 10ರ ಅಪರಾಹ್ನ 2ರಿಂದ 4ರ ವರೆಗೆ 3ರಿಂದ 10ನೇ ತರಗತಿ ವರೆಗಿನವರಿಗೆ ಚಿತ್ರ ಕಲಾ ಸ್ಪರ್ಧೆ, ಆ. 11ರ ಅಪರಾಹ್ನ 1.30ಕ್ಕೆ ಪ್ರಾಥಮಿಕ (1ರಿಂದ 10ನೇ ಶ್ಲೋಕ), ಪ್ರೌಢಶಾಲಾ ಮಕ್ಕಳಿಗೆ (15ನೇ ಅಧ್ಯಾಯ) ಗೀತಾ ಕಂಠಪಾಠ ಸ್ಪರ್ಧೆ, ಆ. 12ರ ಬೆಳಗ್ಗೆ 10ಕ್ಕೆ ಪಿಯುಸಿ-ಪದವಿ, ಸಾರ್ವಜನಿಕರಿಗೆ ಭಕ್ತಿ ಸಂಗೀತ, ಆ. 17ರ ಅಪರಾಹ್ನ 3.30ಕ್ಕೆ 5ರಿಂದ 10ನೇ ತರಗತಿ ವರೆಗೆ ರಸಪ್ರಶ್ನೆ, ಆ. 18ರ ಅಪರಾಹ್ನ 2.30ಕ್ಕೆ ರಂಗೋಲಿ ಸ್ಪರ್ಧೆ, ಆ. 19ರ ಬೆಳಗ್ಗೆ 9.30ಕ್ಕೆ ಮಕ್ಕಳಿಗೆ ಹುಲಿವೇಷ, ಆ. 21ರ ಅಪರಾಹ್ನ 3ಕ್ಕೆ ಶಂಖ ಊದುವ ಸ್ಪರ್ಧೆ, ಆ. 22ರ ಅಪರಾಹ್ನ 3ಕ್ಕೆ ಬತ್ತಿ ಮಾಡುವ ಸ್ಪರ್ಧೆ, ಆ. 23ರ ಬೆಳಗ್ಗೆ 10ಕ್ಕೆ 3ರಿಂದ 8 ವರ್ಷದೊಳಗೆ ಮೂರು ವಿಭಾಗದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ, ಬೆಳಗ್ಗೆ 10ಕ್ಕೆ ಮೊಸರು ಕಡೆಯುವ ಸ್ಪರ್ಧೆ, ಆ. 24ರ ಸಂಜೆ 4ಕ್ಕೆ ಹುಲಿವೇಷ ಸ್ಪರ್ಧೆ, ಜಾನಪದ ವೇಷ ಸ್ಪರ್ಧೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.