ಶ್ರೀನಗರ: ಮೇ 4 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಐಎಎಫ್ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತೀಯ ವಾಯುಪಡೆ (ಐಎಎಫ್) ಬೆಂಗಾವಲು ಪಡೆ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಇಂದು (ಮೇ 5) ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಎಎನ್ಐ ವರದಿಯ ಪ್ರಕಾರ ದಾಳಿಯ ಹೊಣೆ ಹೊತ್ತಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚುವುದು ಶೋಧ ಕಾರ್ಯಾಚರಣೆಯ ಉದ್ದೇಶವಾಗಿತ್ತು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಭದ್ರತಾ ಪಡೆಗಳು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿದ್ದು, ಪ್ರದೇಶದಲ್ಲಿ ಸಂಪೂರ್ಣ ತಪಾಸಣೆ ನಡೆಸುತ್ತಿವೆ.
ಸನೈ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಉಧಮ್ಪುರದ ಕಮಾಂಡ್ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲಾಯಿತು. ದುರದೃಷ್ಟವಶಾತ್, ಗಾಯಗೊಂಡ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
ದಾಳಿಯ ನಂತರ, ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಸೇನೆ ಮತ್ತು ಪೊಲೀಸರ ಬೆಂಬಲದೊಂದಿಗೆ ದಾಳಿಕೋರರನ್ನು ಬಂಧಿಸಲು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.