ಉಡುಪಿ: 1995 ಮೇ 5 ರಂದು ಪ್ರಾರಂಭವಾದ ಗಾಂಧಿ ಆಸ್ಪತ್ರೆಯು 30 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಪಂಚಮಿ ಟ್ರಸ್ಟ್ ಮತ್ತು ಪಂಚಲಹರಿ ಫೌಂಡೇಶನ್ ಆಶ್ರಯದಲ್ಲಿ ಮೇ.5 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ರಕ್ತನಿಧಿ, ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಕಾರ್ಯಕ್ರಮವನ್ನುದ್ಘಾಟಿಸಲಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಐ.ಪಿ ಗಡಾದ್, ಉಡುಪಿ ಜಿಲ್ಲಾ ಸರ್ಜನ್, ಡಾ. ಎಚ್ ಅಶೋಕ್, ಐ.ಎಂ.ಎ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿಯ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯುವ ವಿಜ್ಞಾನಿ ಡಾ. ಎನ್ ರಮೇಶ್ ಹೊಳ್ಳ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ. ಗಣಪತಿ ಭಟ್, ರಾಷ್ಟ್ರಮಟ್ಟದ ಮಹಿಳಾ ದಿವ್ಯಾಂಗರ ಕ್ರಿಕೆಟ್ ಪಂದ್ಯಾಟದಲ್ಲಿ ಜಯಭೇರಿ ಬಾರಿಸಿದ ಕರ್ನಾಟಕ ತಂಡದ ಸವ್ಯಸಾಚಿ ಆಟಗಾರ್ತಿ ಶ್ರೀಲತಾ, ಬಾಲ ಪ್ರತಿಭೆಗಳಾದ ಮನು ವಿ ತಂತ್ರಿ, ಮಧ್ವ ವಿ ತಂತ್ರಿ ಇವರನ್ನು ಸನ್ಮಾನಿಸಲಾಗುವುದು.
ಸಾಮಾಜಿಕ ಕಳಕಳಿಯಿಂದ ಕಳೆದ 20 ವರ್ಷಗಳಿಂದ ರಕ್ತದಾನ ಶಿಬಿರ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸಮಾಜ ಸೇವೆಯಲ್ಲಿ ಗಾಂಧಿ ಆಸ್ಪತ್ರೆಯೊಂದಿಗೆ ಕೈ ಜೋಡಿಸಬೇಕಾಗಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.