ಉಡುಪಿ: ಲೋಕಸಭಾ ಚುನಾವಣೆ ಕುರಿತು ಮಾಧ್ಯಮದವರು ತಮ್ಮ ದೈನಂದಿನ ಸುದ್ದಿ, ಜಾಹೀರಾತು ಸೇರಿದಂತೆ ಮತ್ತಿತರ ವಿಷಯಗಳನ್ನು ತಮ್ಮ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವಾಗ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಧ್ಯಮದ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಕಿವಿಮಾತು ಹೇಳಿದರು.
ಅವರು ಇಂದು ನಗರದ ಬ್ರಹ್ಮಗಿರಿಯ ವಾರ್ತಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಚುನಾವಣೆಯಲ್ಲಿ ಪತ್ರಕರ್ತರ ಪಾತ್ರ ಕುರಿತು ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಚುನಾವಣಾ ಆಯೋಗ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅನೇಕ ನಿಯಮಗಳು, ಕಾಯಿದೆಗಳನ್ನು ಜಾರಿಗೆ ತರುವುದರ ಜೊತೆಗೆ ಕೆಲವೊಂದು ಮಾರ್ಗದರ್ಶನಗಳನ್ನು ಸಹ ನೀಡಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು, ಕಾಸಿಗಾಗಿ ಸುದ್ದಿಗಳನ್ನು ಪ್ರಕಟಿಸದೇ ಇರಲು ನಿರ್ಬಂಧ, ಚುನಾವಣಾ ಸಮೀಕ್ಷೆ ನಿಗದಿತ ದಿನಗಳಲ್ಲಿ ಪ್ರಚಾರ ಪಡಿಸುವ ನಿರ್ಬಂಧ ಸೇರಿದಂತೆ ಮತ್ತಿತರ ನಿರ್ಬಂಧಗಳನ್ನು ವಿಧಿಸುವುದರೊಂದಿಗೆ ಮತದಾರರು ಅನಗತ್ಯ ಪ್ರಭಾವಗಳಿಗೆ ಒಳಗಾಗದೇ ಮುಕ್ತವಾಗಿ ಮತದಾನ ಮಾಡಲು ಅನುಕೂಲ ಮಾಡುವ ಉದ್ದೇಶ ಹೊಂದಿದೆ ಎಂದರು.
ನಿರ್ದಿಷ್ಟ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯ ಪರವಾಗಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಗಳುವ ಲೇಖನಗಳು, ಸಮಾಜದಲ್ಲಿ ಪ್ರತಿಯೊಂದು ವರ್ಗದವರ ಬೆಂಬಲ ಅವರಿಗಿದೆ ಎಂದು ಪದೇ ಪದೇ ಶ್ಲಾಘಿಸಿ ಬರೆಯುವುದು, ಅವರು ಕ್ಷೇತ್ರದಲ್ಲಿ ಚುನಾವಣೆ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳುವ ಸುದ್ದಿ ಅಲ್ಲದೇ ಪುನರಾವರ್ತಿತ ಅಭ್ಯರ್ಥಿಯ ಕವರೇಜ್ ನೀಡುವುದು, ಕಾಸಿಗಾಗಿ ಸುದ್ದಿ ವ್ಯಾಪ್ತಿಯಲ್ಲಿ ಬರಲಿದೆ ಎಂದರು.
ಸಾಮಾಜಿಕ ಜಾಲತಾಣಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ, ವೆಬ್ಸೈಟ್ಗಳು ಸೇರಿದಂತೆ ಮತ್ತಿತರ ಡಿಜಿಟಲ್ ಮಾಧ್ಯಮದ ಮೂಲಕ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಜಿಲ್ಲಾ ಎಂ.ಸಿ.ಎಂ.ಸಿ ವತಿಯಿಂದ ಪೂರ್ವಾನುಮತಿ ಪಡೆದು ಜಾಹೀರಾತುಗಳನ್ನು ಪ್ರಕಟಿಸಬೇಕು. ಒಂದೊಮ್ಮೆ ಇದನ್ನು ಉಲ್ಲಂಘಿಸಿದ್ದಲ್ಲಿ ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ ಎಂದರು.
ದೇಶದಲ್ಲಿ ಲೋಕಸಭಾ ಚುನಾವಣೆಯು ಏಳು ಹಂತದಲ್ಲಿ ನಡೆಯಲಿದೆ, ಏಪ್ರಿಲ್ 19 ರಂದು ಪ್ರಾರಂಭವಾಗಿ ಜೂನ್ 1 ರಂದು ಸಂಜೆ 6.30 ರ ಗಂಟೆಯ ನಡುವಿನ ಅವಧಿಯಲ್ಲಿ ಯಾವುದೇ ಮಾಧ್ಯಮದಲ್ಲಿ ಮತದಾನಕ್ಕೆ ಸಂಬಂಧಪಟ್ಟ ಅಭಿಪ್ರಾಯ ಸಮೀಕ್ಷೆಗಳು ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಮೀಕ್ಷೆ ಫಲಿತಾಂಶವನ್ನು ಪ್ರಸಾರ ಮಾಡಲು ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ ಎಂದರು.
ಮತದಾನದ ದಿನ ಹಾಗೂ ಮತದಾನದ ಪೂರ್ವ ದಿನ ಮುದ್ರಣ ಮಾಧ್ಯಮಗಳಲ್ಲಿ ವಿವಿಧ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ರಾಜ್ಯ ಅಥವಾ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಒಟ್ಟು ಮತದಾರರ ಸಂಖ್ಯೆ, ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರ, ಅಗತ್ಯ ಸೇವೆಗಳು ಹಾಗೂ ಮತದಾನ ದಿನದ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತದಾನ ಮಾಡಲು ತೆಗೆದುಕೊಂಡ ವಿವರ, ಮತಯಂತ್ರಗಳ ಬಳಕೆ ಅಂಕಿ-ಸಂಖ್ಯೆಗಳು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿರ್ಬಂಧಿಸಲು ರಚಿಸಿರುವ ತಂಡಗಳ ವಿವರ ಈವರೆಗೆ ವಶಪಡಿಸಿಕೊಂಡ ಅಕ್ರಮ ಮಧ್ಯ ವಸ್ತುಗಳು, ಹಣ ಸೇರಿದಂತೆ ಮತ್ತಿತರ ವಿವರಗಳ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು.
ಜಿಲ್ಲೆಯ ಪ್ರತಿಯೊಬ್ಬ ಮತದಾರರು ಏಪ್ರಿಲ್ 26 ಹಾಗೂ ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ಸಂವಿಧಾನಿಕವಾಗಿ ಲಭ್ಯವಿರುವ ಅಮೂಲ್ಯವಾದ ಮತವನ್ನು ತಪ್ಪದೇ ಚಲಾಯಿಸಬೇಕೆಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ನೋಡೆಲ್ ಅಧಿಕಾರಿ ಡಾ. ಅರುಣ್ ಕೆ, ಜಿಲ್ಲಾ ವಾರ್ತಾಧಿಕಾರಿ ಹಾಗೂ ಮಾಧ್ಯಮ ನೋಡೆಲ್ ಅಧಿಕಾರಿ ಮಂಜುನಾಥ್ ಬಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾರ್ಯದರ್ಶಿ ನಝೀರ್ ಪೊಲ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.