ಮುನವಳ್ಳಿ (ಬೆಳಗಾವಿ ಜಿಲ್ಲೆ): ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿನಿ ಕೊಲೆ ಖಂಡಿಸಿ, ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ವಿವಿಧ ಸಮುದಾಯಗಳ ನಾಗರಿಕರು, ಬಿಜೆಪಿ, ಕಾಂಗ್ರೆಸ್ ಮುಖಂಡರು ಪ್ರತ್ಯೇಕವಾಗಿ ತೀವ್ರ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ವ್ಯಾಪಾರ ವಹಿವಾಟು, ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಿದರು.
ಎಂಸಿಎ ಓದುತ್ತಿದ್ದ ನೇಹಾ ಹಿರೇಮಠ (25) ಅವರನ್ನು ಸಹಪಾಠಿ ಫಯಾಜ್ (27) ಕಾಲೇಜು ಆವರಣದಲ್ಲೇ ಚಾಕು ಇರಿದು ಕೊಲೆ ಮಾಡಿದ್ದ. ಫಯಾಜ್ ಮುನವಳ್ಳಿ ಗ್ರಾಮದವನಾದ್ದರಿಂದ ಗ್ರಾಮದ ಜನ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಶುಕ್ರವಾರ ಬೆಳಿಗ್ಗೆಯೇ ಯರಗಟ್ಟಿ– ಧಾರವಾಡ ನಡುವಿನ ರಾಜ್ಯ ಹೆದ್ದಾರಿ ಬಂದ್ ಮಾಡಿದರು. ಗ್ರಾಮದೊಳಗಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದರು. ಇದರಿಂದ ಅಪಾರ ಸಂಖ್ಯೆಯ ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲಾಗಿ ನಿಂತವು. ಗೋಕಾಕ, ಯರಗಟ್ಟಿಯಿಂದ ಧಾರವಾಡ, ಯಲ್ಲಮ್ಮನಗುಡ್ಡಕ್ಕೆ ಹೋಗುವವರು ತೊಂದರೆ ಅನುಭವಿಸಿದರು.
ಐತಿಹಾಸಿಕ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಜನ ಧರಣಿ ನಡೆಸಿದರು. ಹಿಂದೂ, ಮುಸ್ಲಿಂ, ವೀರಶೈವ ಲಿಂಗಾಯತ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಜನರೂ ಪಾಲ್ಗೊಂಡರು.
ವಿದ್ಯಾರ್ಥಿನಿ ಕೊಲೆ ಅತ್ಯಂತ ನೋವು ತರಿಸಿದೆ. ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆ ಕೊಡಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ಮಹಾನಗರ ವತಿಯಿಂದ ಶುಕ್ರವಾರ ಕಾಲೇಜುಗಳ ಬಂದಗೆ ಕರೆ ನೀಡಲಾಗಿದೆ. ವಿದ್ಯಾರ್ಥಿನಿ ಕೊಲೆ ಮಾಡಿರುವುದನ್ನು ಖಂಡಿಸಿ ಗುರುವಾರ ರಾತ್ರಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದೆ.