ಕಾಪು: ಭರದಿಂದ ಸಾಗುತ್ತಿರುವ ಕಾಪು ಮಾರಿಯಮ್ಮ ದೇವಿಯ ನೂತನ ದೇಗುಲ ಸಮರ್ಪಣೆ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಎ. 9ರಂದು ಬೆಳಿಗ್ಗೆ 8.30ಕ್ಕೆ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಚಂಗಿ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹೊಸ ಮಾರಿಗುಡಿಯ ಪ್ರಧಾನ ತಂತ್ರಿ ವಿ| ಕೆ.ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಪ್ರಾಚೀನ ಶೈಲಿಯ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ಪೂರ್ವಭಾವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಅಂದಿನಿಂದ ಮುಂದಿನ 9 ತಿಂಗಳು ಪ್ರತೀ ತಿಂಗಳಿಗೊಂದರಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ, 2025ರ ಜ. 14ರ ಬಳಿಕ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ ಎಂದರು.
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಮ್ಮನ ಭವ್ಯ ಗರ್ಭಗುಡಿಯ ದಿವ್ಯ ಸಾನ್ನಿಧ್ಯದಲ್ಲಿ ಕೋಣಗಳಿಂದ ಉಳುಮೆ ಮಾಡುವ ಮೂಲಕ ನವಧಾನ್ಯಗಳ ಬಿತ್ತನೆ ಮಾಡಲಾಗುವುದು. ಮುಂದಿನ 18 ದಿನಗಳಲ್ಲಿ ಧಾನ್ಯಗಳು ಮೊಳಕೆಯೊಡೆದಾಗ ಗೋ ನಿವಾಸಕ್ಕಾಗಿ ಗರ್ಭಗುಡಿಯಲ್ಲಿ 9 ಅಥವಾ 18 ಗೋವುಗಳನ್ನು ಪೂಜಿಸಿ, ಧಾನ್ಯ ಮೇಯಲು ಬಿಡಲಾಗುತ್ತದೆ. ಗೋವುಗಳು ಸಾನ್ನಿಧ್ಯದಲ್ಲಿ 9 ದಿನ ಗೋವಾಸವಿದ್ದು 9ನೇ ದಿನ ಗೋವುಗಳಿಂದ ಹಾಲನ್ನು ಕರೆದು ಪಂಚಗವ್ಯ ತಯಾರಿಸಿ ಅವುಗಳಿಂದ ದೇವಸ್ಥಾನದ ಆವರಣವನ್ನು ಸಂಪ್ರೋಕ್ಷಣೆ ಮಾಡಿ ಶುದ್ಧಿಗೊಳಿಸಲಾಗುತ್ತದೆ. ಈ ವಿಧಾನಗಳು ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿ ಸಾಕ್ಷಿ ಬರೆಯಲಿದೆ ಎಂದರು.
ಬೆಳಗ್ಗೆ 11ಕ್ಕೆ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರ, ಭೋಜನ ಶಾಲೆ, ಆಡಳಿತ ಕಚೇರಿ ಹಾಗೂ ಸುಸಜ್ಜಿತ ಶೌಚಾಲಯ ನಿರ್ಮಾಣ ಯೋಜನೆಗೆ ಭೂಮಿ ಪೂಜೆ, ಶಂಕು ಸ್ಥಾಪನೆ ಸಹಿತ ಶಿಲಾನ್ಯಾಸ ನೆರವೇರಿಸಲಾಗುವುದು. ಆ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕ ಘೋಷಣೆ, ಅಮ್ಮನ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿಯನ್ನು ಉದ್ಘಾಟಿಸಲಾಗುವುದು. ಚರಿತ್ರೆಗೆ ಸೇರಲಿರುವ ಭವ್ಯ ಸಮಾರಂಭದಲ್ಲಿ ವಿವಿಧ ಗಣ್ಯರು, ದಾನಿಗಳು, ಅಮ್ಮನ ಭಕ್ತ ವೃಂದ, ಸಮಿತಿಯ ಸದಸ್ಯರು ಹಾಗೂ ಊರ ಪರವೂರ ಮಹನಿಯರು ಭಾಗವಹಿಸಲಿದ್ದಾರೆ. ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದರು.
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.
 
								 
															





 
															 
															 
															











