ಮಾಸ್ ಇಂಡಿಯಾ ಮಾಹಿತಿ ಸೇವಾ ಸಮಿತಿಯಿಂದ ಪ್ರತಿಭಟನೆ

ಉಡುಪಿ: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯ ತಿದ್ದುಪಡಿ ವಿರೋಧಿಸಿ ಹಾಗೂ ಸ್ವತಂತ್ರ ಕಾರ್ಯನಿರ್ವಹಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಮಾಸ್‌ ಇಂಡಿಯಾ ಮಾಹಿತಿ ಸೇವಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.
ಮಾಸ್‌ ಇಂಡಿಯಾ ಮಾಹಿತಿ ಸೇವಾ ಸಮಿತಿಯ ಕರ್ನಾಟಕದ ಅಧ್ಯಕ್ಷ ಜಿ.ಎ. ಕೋಟೆಯಾರ್‌ ಮಾತನಾಡಿ, ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ರಾಜಕೀಯ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಲಾಗುತ್ತಿದೆ. ಇದರಿಂದ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಂಡು ಮುಂದೆ ಅವರೇ ಈ ದೇಶದ ಬಂಡವಾಳಶಾಹಿಗಳಾಗುತ್ತಾರೆ ಎಂದರು.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ೮೦ ಮಾಹಿತಿ ಸೇವಾ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಮಾಹಿತಿ ಹಕ್ಕಿನ ಅಧಿಕಾರಿಗಳ ಮುಂದೆ ಸುಮಾರು ೧೫,೦೦೦ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ. ಈಗ ಮಾಡಿರುವ ತಿದ್ದುಪಡಿಯಿಂದ ಯಾವುದೇ ನಾಗರಿಕನಿಗೆ ಮಾಹಿತಿ ಹಕ್ಕಿನಲ್ಲಿ ನ್ಯಾಯ ಸಿಗುವುದಿಲ್ಲ. ಈ ಕಾಯಿದೆಯನ್ನು ದುರ್ಬಲಗೊಳಿಸದೆ ದೇಶದ
ಭ್ರಷ್ಟಾಚಾರ ಹಾಗೂ ಕಾಳಧನವನ್ನು ನಿರ್ಮೂಲನೆ ಮಾಡುವ ಅಸ್ತ್ರವನ್ನಾಗಿ ಬಳಸಬೇಕು ಎಂದರು.
ಅನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿಯನ್ನು ಸಲ್ಲಿಸಲಾಯಿತು. ಯುವ ಮುಖಂಡ ವಿಶ್ವನಾಥ್‌, ಪ್ರಮುಖರಾದ ಜಯ ಪೂಜಾರಿ, ವಿಠಲ ಜತ್ತನ್ನ, ರವಿ ಶೆಟ್ಟಿ, ಸುಜಾತ, ಗೀತಾ ಸುವರ್ಣ, ರಾಜೇಶ್‌ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.