ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ (POK) ಜನರೇ ಭಾರತದೊಂದಿಗೆ ವಿಲೀನಗೊಳ್ಳುವ ಬೇಡಿಕೆಯನ್ನು ಎತ್ತುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಭಾನುವಾರ ಹೇಳಿದ್ದಾರೆ. ಪಿಒಕೆ ಜನರು ಭಾರತದೊಂದಿಗೆ ವಿಲೀನಗೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಇತ್ತೀಚಿನ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜನಾಥ್ ಸಿಂಗ್, ” ಅವರು ಎಂದಾದರೂ ಕಾಶ್ಮೀರವನ್ನು ಪಡೆಯಬಹುದೆ? ಅವರು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚಿಂತಿಸಬೇಕು. ದಾಳಿ ಮಾಡುವ ಅಗತ್ಯವಿಲ್ಲದೆಯೆ ನಾವು ಪಿಒಕೆ ಅನ್ನು ತೆಗೆದುಕೊಳ್ಳಲಿದ್ದೇವೆ ಎಂದು ನಾನು ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಹೇಳಿದ್ದೆ. ಏಕೆಂದರೆ ಪಿಒಕೆ ಜನರು ಸ್ವತಃ ಭಾರತದೊಂದಿಗೆ ವಿಲೀನಗೊಳ್ಳಲು ಒತ್ತಾಯಿಸುವ ಪರಿಸ್ಥಿತಿ ಅಲ್ಲಿ ಬೆಳೆಯುತ್ತಿದೆ” ಎಂದಿದ್ದಾರೆ.
ಸರ್ಕಾರ ಯಾವುದಾದರೂ ಯೋಜನೆ ರೂಪಿಸುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಹೆಚ್ಚೇನೂ ಹೇಳುವುದಿಲ್ಲ, ನಾನು ಹೇಳಬಾರದು. ನಾವು ಯಾವುದೇ ದೇಶದ ಮೇಲೆ ದಾಳಿ ಮಾಡಲು ಹೋಗುವುದಿಲ್ಲ. ಭಾರತವು ವಿಶ್ವದ ಯಾವುದೇ ದೇಶದ ಮೇಲೆ ದಾಳಿ ಮಾಡುವ ಗುಣವನ್ನು ಹೊಂದಿಲ್ಲ. ನಾವು ಇತರರ ಭೂಪ್ರದೇಶದ ಒಂದು ಇಂಚು ಕೂಡಾ ಆಕ್ರಮಿಸಿಕೊಂಡಿಲ್ಲ. ಆದರೆ ಪಿಒಕೆ ನಮ್ಮದಾಗಿತ್ತು, ಮತ್ತದು ನಮ್ಮದೇ ಆಗಿದೆ. ಪಿಒಕೆ ಸ್ವತಃ ಭಾರತದೊಂದಿಗೆ ವಿಲೀನಗೊಳ್ಳುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಇಂಡಿಯಾ ಟಿವಿಯಲ್ಲಿ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.