ಉಳುವವನ ಗೌರವಿಸಿ ಕೃಷಿ ಸಂಸ್ಕ್ರತಿ ಉಳಿಸೋಣ: ಬಾಲಕೃಷ್ಣ ಮದ್ದೋಡಿ

ಉಡುಪಿ: ಭಾರತೀಯ ಸಂಸ್ಕ್ರತಿಯ ಜೀವನಾಡಿಯಾದ ಕೃಷಿ ಜೀವನ ಇಂದು ನಿಧಾನಗತಿಯಿಂದ ನಶಿಸುವತ್ತ ಸಾಗಿದೆ. ಯುವ ಜನತೆಗೆ ಕೃಷಿಯ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಜಗತ್ತಿಗೆ ಕೃಷಿ ಉತ್ಪನ್ನಗಳನ್ನು ಪೂರೈಸುತಿದ್ದ ಭಾರತವು ಇಂದು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದೆ. ಕೃಷಿಯನ್ನೇ ನಂಬಿ ಕೊಂಡು ಜೀವನ ಮಾಡುತ್ತಿರುವ ಕುಟುಂಬದರಿಗೆ ಬೆಲೆಯೇ ಇಲ್ಲವಾಗಿದೆ. ಕೃಷಿಕರು ಸವಲತ್ತುಗಳಿಗೆ ಸರಕಾರದಿಂದ ಕೈ ಚಾಚುವ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕೃಷಿಕರನ್ನು ಗೌರವಿಸಿ ಅವರ ಉದ್ಯೋಗವನ್ನು ಪ್ರೋತ್ಸಾಹಿಸದೆ ಇದ್ದರೆ ಮುಂದಿನ ಜನಾಂಗವು ಕೃಷಿ ಉತ್ಪನ್ನಗಳನ್ನು ಸಂಪೂರ್ಣವಾಗಿ ಹೊರದೇಶಗಳಿಂದ ಆಮದು ಮಾಡಿ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಣಿಪಾಲ ಎಂಐಟಿ ಪ್ರಾದ್ಯಾಪಕ ಬಾಲಕೃಷ್ಣ ಮದ್ದೋಡಿ ಅವರು ಆತಂಕ ವ್ಯಕ್ತ ಪಡಿಸಿದರು.
ನೀಲಾವರ ಚಂದ್ರಕಾಂತ್ ಸೇರ್ವೆಗಾರ್ ರವರ ಗದ್ದೆಯಲ್ಲಿ ಉಡುಪಿ ರೋಟರಿ ಕ್ಲಬ್ ರಾಯಲ್, ರಾಮ ಕ್ಷತ್ರಿಯ ಯುವ ಸಂಘ ನೀಲಾವರ ಘಟಕ, ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕ್ರಷಿದರ್ಶನ- ರೈತರೊಂದಿಗೆ ಒಂದು ದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಥಳೀಯ ಕೃಷಿಕರಾದ ಚಂದ್ರಾವತಿ ಆಚಾರ್ತಿ, ರತ್ನ ಆಚಾರ್ತಿ, ದೇವಕಿ ಬಳೆಗಾರ ಗುಲಾಬಿ ಸೇರ್ವೆಗಾರ್, ವಿಠ್ಠಲ್ ಬಳೆಗಾರ, ಜಲಂಧರ,ರಾಜೇಂದ್ರ ಸೇರ್ವೆಗಾರ್, ಶಂಕರ್, ಪದ್ಮನಾಭ್ ಸೇರ್ವೆಗಾರ್, ಪ್ರಭಾಕರ್ ಸೇರ್ವೆಗಾರ್, ಉದಯಕಾಂತ್, ಶಾರದಾ, ಗುಲಾಬಿ, ವಿಘ್ನೇಶ್ವರ, ಪಾಂಡು ನಾಯ್ಕ ಅವರನ್ನು ಸಮ್ಮಾನಿಸಲಾಯಿತು.
ರಾಯಲ್ ಅಧ್ಯಕ್ಷ ಯಶವಂತ್ ಬಿ. ಕೆ. ಅಧ್ಯಕ್ಷತೆ ವಹಿಸಿದ್ದರು. ತೇಜೇಶ್ವರ ರಾವ್, ಜ್ಯೋತಿ ಕೃಷ್ಣ ಮೂರ್ತಿ, ಸುಧಾಕರ್ ಕೋಟ್ಯಾನ್, ಚಂದ್ರಶೇಖರ್ ಶೆಟ್ಟಿ ಗೋವಾ, ರಾಮಕ್ಷತ್ರಿಯ ಸಂಘ ನೀಲಾವರ ಘಟಕದ ಅಧ್ಯಕ್ಷ ಹರೀಶ್ ನೀಲಾವರ, ಕರುಣಾಕರ್ ಎನ್, ಪ್ರಮುಖರಾದ ಡಾ. ನಾಗರಾಜ್, ರಾಘವೇಂದ್ರ ಕೆ,. ಉದ್ಯಮಿ ಗೋಪಾಲ್ ಸಿಂಗ್ ಭಾಗವಹಿಸಿದ್ದರು. ಸಹಕಾರ ಭಾರತೀ ಉಡುಪಿ ತಾಲೂಕು ಇದರ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ ಪ್ರಾಸ್ತಾವನೆಗೈದರು.
ಘಟಕದ ಉಡುಪಿ ತಾಲೂಕು ಪ್ರದಾನ ಕಾರ್ಯದರ್ಶಿ ಕೃಷ್ಣ ಎನ್ ಸ್ವಾಗತಿಸಿ, ರಾಮದಾಸ್ ಪಿ. ವಂದಿಸಿದರು. ಕಾರ್ಯಕ್ರಮ ನಿರ್ದೇಶಕ ಗುರುಪ್ರಸಾದ್ ಪಾಲನ್ ನಿರೂಪಿಸಿದರು.