ಪೆರ್ಣಂಕಿಲ: ವರ್ವಾಡಿ ಗದ್ದೆಯಲ್ಲಿ ಕೆಸರ್ಡೊಂಜಿ ದಿನ

ಉಡುಪಿ: ನಗರದ ಹೊರವಲಯದ ಪೆರ್ನಂಕಿಲ ವಾರ್ವಾಡಿ ಗ್ರಾಮದ ಗದ್ದೆಯಲ್ಲಿ ‘ಕೆಸರ್ಡ್‌ ಒಂಜಿ ದಿನ’ ಗ್ರಾಮೀಣ ಕ್ರೀಡಾಕೂಟ ಭಾನುವಾರ ಸಂಭ್ರಮದಿಂದ ನಡೆಯಿತು. ಸುತ್ತಮುತ್ತಲ ಊರುಗಳಿಂದ ಆಗಮಿಸಿದ ನೂರಾರು ಜನರು ಕೆಸರು ಗದ್ದೆಗಿಳಿದು ಸಂಭ್ರಮಿಸಿದರು.
ವಾರ್ವಾಡಿ ಫ್ರೆಂಡ್ಸ್‌ ನೇತೃತ್ವದಲ್ಲಿ ಕೆಸರ್ಡ್‌ ಒಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ಮೊದಲ ಬಾರಿಗೆ ಆಯೋಜಿಸಿದ ಗ್ರಾಮೀಣ ಕ್ರೀಡಾಕೂಟವು ಸಡಗರದಿಂದ ಜರಗಿತು. ಕೆಸರು ಗದ್ದೆಗಿಳಿದ ಯುವಕ ಯುವತಿಯರು ಕೆಸರನ್ನು ಮೈಗೆ ಎರಚಿಕೊಂಡು, ಕುಣಿದು ಕುಪ್ಪಳಿಸಿದರು.
ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಲಿಂಬೆ ಚಮಚ ಓಟ, ಒಂಟಿ ಕಾಲಿನ ಓಟ, ಹಾಳೆ ಓಟ, ಕೆಸರು ಗದ್ದೆ ಓಟ, ಕೆಸರಿನಲ್ಲಿ ನಿಧಿ ಶೋಧನೆ, ಹಗ್ಗಜಗ್ಗಾಟ ಈ ಮೊದಲಾದ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವಯಸ್ಸಿನ ಮಿತಿಯನ್ನು ಲೆಕ್ಕಿಸದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹಿರಿಯರು, ಕಿರಿಯರು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಸುಭಾಷ್‌ ಹೆಗ್ಡೆ, ಪ್ರಕಾಶ್‌ ಶೆಟ್ಟಿ, ಜಗದೀಶ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.