ಬೆಂಗಳೂರು: ರಾಜ್ಯದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ (Board Exams) ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್(Karnataka High Court) ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ. 5, 8, 9,11 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.
ಸ್ಥಗಿತಗೊಂಡಿದ್ದ ಪರೀಕ್ಷೆ ಮುಂದುವರೆಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಮುಂದಿನ ಪರೀಕ್ಷೆಯ ವೇಳೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ನ್ಯಾ. ಕೆ. ಸೋಮಶೇಖರ್, ನ್ಯಾ. ಕೆ. ರಾಜೇಶ್ ರೈ ಅವರು ಇರುವ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ. ಸರ್ಕಾರದ ಮೇಲ್ಮನವಿ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಹೈಕೋರ್ಟ್ ಏಕಸದಸ್ಯ ಪೀಠ ಶಾಲೆಗಳ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು.
ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ನಡೆ ನೀಡಿತ್ತು. ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿತ್ತು. ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ವಾದ ಪ್ರತಿವಾದ ಆಲಿಸಿದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತ್ತು.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿಚಾರ ಕುರಿತಂತೆ ಅನಿಶ್ಚಿತತೆ ಮುಂದುವರೆದಿತ್ತು. ಪರೀಕ್ಷೆ ರದ್ದಾಗುತ್ತದೆಯೇ ಅಥವಾ ನಡೆಯುತ್ತದೆಯೇ ಎಂಬುದರ ಕುರಿತಾಗಿ ಗೊಂದಲ ಮುಂದುವರೆದಿದ್ದು, ಮಕ್ಕಳು ಮತ್ತು ಪೋಷಕರ ಸ್ಥಿತಿ ಅಯೋಮಯವಾಗಿತ್ತು.ಇದೀಗ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆದಿದೆ.
5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ.