ಮಲ್ಪೆ: ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಇದರ ನೂತನವಾಗಿ ನಿರ್ಮಿಸಿದ ಶ್ರೀ ರಾಮಧಾಮ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀ ದೇವರಿಗೆ ಸ್ವರ್ಣ ಕವಚ ಸಮರ್ಪಣೆ ಕಾರ್ಯಕ್ರಮವು ಸೋಮವಾರ ನಡೆಯಿತು.
ಮಂದಿರಕ್ಕೆ ಪ್ರಥಮ ಭೇಟಿ ನೀಡಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದ ಒಡೆಯರ್ ಸ್ವಾಮೀಜಿಯವರನ್ನು ಕಲ್ಮಾಡಿ ಸೇತುವೆ ಬಳಿಯಿಂದ ಭವ್ಯವಾದ ಮೆರವಣಿಗೆಯಲ್ಲಿ ಚಂಡೆ , ಮಂಗಳವಾದ್ಯ , ಭಜನೆ ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಪಾದ ಪೂಜೆಗೈದು ಫಲ ಪುಷ್ಪ , ಗುರುಕಾಣಿಕೆ ನೀಡಲಾಯಿತು. ಶ್ರೀ ರಾಮದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ, ವೇದಮಂತ್ರ ಪಠಣದೊಂದಿಗೆ ಸ್ವಾಮೀಜಿಗಳ ದಿವ್ಯ ಕರಕಮಲಗಳಿಂದ ಶ್ರೀ ರಾಮ , ಸೀತೆ, ಲಕ್ಷ್ಮಣ, ಹನುಮಂತ ದೇವರುಗಳಿಗೆ ಸ್ವರ್ಣಕವಚ ಸಮರ್ಪಣೆ ಕಾರ್ಯಕ್ರಮ ನೇರವೇರಿತು. ಭದ್ರತಾ ಕೋಶ, ರಜತ ಪ್ರಭಾವಳಿ, ಸಮರ್ಪ ಣೆ, ಶ್ರೀ ದೇವರಿಗೆ ವಿಶೇಷ ಅಲಂಕಾರ ನಡೆಯಿತು. ಮಹಾ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರಾಮಧಾಮ ಕಟ್ಟಡವನ್ನು ದೀಪ ಬೆಳಗಿಸಿ ಲೋಕಾರ್ಪಣೆಗೊಳಿಸಿ ದೇವಳದ ಹಬ್ಬಹರಿದಿನದ ಈ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಅಯೋಧ್ಯೆ ಶ್ರೀರಾಮನ ಮಂದಿರದ ಉದ್ಘಾಟನೆಯ ಶುಭ ಅವಸರದಲ್ಲಿಯೇ ಇಲ್ಲಿನ ಮಂದಿರ ಉದ್ಘಾಟನೆಗೊಂಡು 25 ನೇ ವರ್ಷಕ್ಕೆ ( ರಜತ ಸಂಭ್ರಮ ) ಸವಿ ನೆನಪಿಗಾಗಿ ಶ್ರೀ ದೇವರಿಗೆ ಸ್ವರ್ಣ ಕವಚ ಸಮರ್ಪಣೆ ಕಾರ್ಯ ಜೊತೆಯಲ್ಲಿ ಶ್ರೀ ರಾಮನ ಆದರ್ಶ ಗುಣವೇ ನಮಗೆ ಸಂಪತ್ತು. ಸಮಾಜಭಾಂದವರು ಶ್ರೀ ರಾಮನ ಚರಿತ್ರೆ, ನೀತಿ ಪಾಲನೆಯನ್ನು ಜೀವನದಲ್ಲಿ ನಿತ್ಯ ಅಳವಡಿಸಿಕೊಂಡು ಜೀವನ ನಡೆಸಿ ಇತರರಿಗೆ ದಾರಿದೀಪವಾಗುವಂತೆ ಬದುಕಿದರೆ ಜೀವನ ಸಾರ್ಥಕ ಎಂದು ಅನುಗ್ರಹ ಸಂದೇಶ ನೀಡಿ ಶುಭ ಹಾರೈಸಿದರು.
ಕಟ್ಟಡಕ್ಕೆ ಸಹಕರಿಸಿದ ಸಮಾಜ ಬಾಂಧವರನ್ನು ಗೌರವಿಸಲಾಯಿತು.
ಶ್ರೀ ರಾಮಮಂದಿರದ ಅಧ್ಯಕ್ಷ ಕೆ. ಗೋಕುಲ್ ದಾಸ್ ಪೈ , ಜಯದೇವ ಭಟ್ ಕಲ್ಯಾಣಪುರ, ಲಕ್ಷ್ಮಣ ಭಟ್, ನಿತ್ಯ ಅರ್ಚಕರಾದ ಶೈಲೇಶ ಭಟ್ , ವಿಶ್ವನಾಥ ಭಟ್, ಕೃಷ್ಣ ಶೆಣೈ, ಅನಂತ ಕಾಮತ್, ಸುಧೀರ್ ಶೆಣೈ , ಸಂತೋಷ ಆಚಾರ್ಯ, ಶ್ರೀಮತಿ ಶಾಲಿನಿ ಪೈ , ಜಿ .ಎಸ್.ಬಿ ಸಮಾಜದ ಶ್ರೀ ರಾಮ ಸೇವಾ ಟ್ರಸ್ಟ್ , ಜಿ .ಎಸ್.ಬಿ ಯುವಕ ಮಂಡಳಿ, ಜಿ .ಎಸ್.ಬಿ ಮಹಿಳಾ ಮಂಡಳಿ, ಸದಸ್ಯರು , ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.












