ಅಡುಗೆ ಅನಿಲ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ 2 ರೂ ಇಳಿಕೆ: ಗ್ರಾಹಕರು ಕೊಂಚ ನಿರಾಳ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿದ್ದು, ಸುಮಾರು ಎರಡು ವರ್ಷಗಳ ಸುದೀರ್ಘ ಅವಧಿಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ 2 ರೂ. ಇಳಿಕೆ ಮಾಡಿದೆ.

ಪರಿಷ್ಕೃತ ಬೆಲೆಯು ಮಾರ್ಚ್ 15ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ ಎಂದು ತೈಲ ಸಚಿವಾಲಯ ಗುರುವಾರ ಸಂಜೆ ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಹೋಲಿಸಿದರೆ ಈಗ 94.72 ರೂ. ಆಗಲಿದೆ. ಹಾಗೆಯೇ ಡೀಸೆಲ್ ಬೆಲೆ ಪ್ರಸ್ತುತ ರೂ. 89.62 ರಿಂದ ರೂ. 87.62 ಆಗಲಿದೆ.

“ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಿರುವುದಾಗಿ ತಿಳಿಸಿವೆ. ಹೊಸ ಬೆಲೆಗಳು 15 ಮಾರ್ಚ್ 2024 ರಿಂದ ಬೆಳಗ್ಗೆ 6 ರಿಂದ ಜಾರಿಗೆ ಬರುತ್ತವೆ” ಎಂದು ಸಚಿವಾಲಯ ತಿಳಿಸಿದೆ.

ಅಡುಗೆ ಅನಿಲ ಎಲ್‌ಪಿಜಿ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 100 ರೂಪಾಯಿ ಕಡಿತ ಘೋಷಿಸಿದ ಒಂದು ವಾರದ ನಂತರ ಬೆಲೆ ಇಳಿಕೆಯಾಗಿದೆ. ಸಾಮಾನ್ಯ ಬಳಕೆದಾರರಿಗೆ ಎಲ್‌ಪಿಜಿ ದರವನ್ನು 14.2 ಕೆಜಿ ಸಿಲಿಂಡರ್‌ಗೆ ರೂ 803 ಕ್ಕೆ ಇಳಿಸಿದೆ. ಉಜ್ವಲ ಯೋಜನೆಯಡಿ ಉಚಿತ ಸಂಪರ್ಕಗಳನ್ನು ಪಡೆದ ಬಡವರಿಗೆ ಸರ್ಕಾರವು ಪ್ರತಿ ಸಿಲಿಂಡರ್ ಸಬ್ಸಿಡಿಗೆ ರೂ. 300 ಅನ್ನು ಲೆಕ್ಕ ಹಾಕಿದ ನಂತರ ರೂ 503ಕ್ಕೆ ಇಳಿದಿದೆ.