ಉಡುಪಿ –ಚಿಕ್ಕಮಗಳೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಘಟಕದ ಅಧ್ಯಕ್ಷರು ನನ್ನ ಮೇಲೆ ವಿಶ್ವಾಸವಿಟ್ಟು ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಿದ್ದಾರೆ. ಉಡುಪಿ –ಚಿಕ್ಕಮಗಳೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹಿಂದುತ್ವ, ರಾಷ್ಟ್ರೀಯತೆ ಹಾಗೂ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮುಂದಿಟ್ಟು ಮತಯಾಚನೆ ಮಾಡುತ್ತೇನೆ. ಮೋದಿ ಅವರ 10 ವರ್ಷಗಳ ಆಡಳಿತ ವಿಶ್ವದ ಮೆಚ್ಚುಗೆ ಪಡೆದಿದ್ದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮತದಾರರ ವಿಶ್ವಾಸ ಪಡೆಯುವಲ್ಲಿ ಸಂಶಯವಿಲ್ಲ ಎಂದರು.

ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯಕ್ಕೆ ಸೇರಿದವರು. ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಿಲ್ಲವ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂಜಾರಿ ಅವರಿಗೆ ಮಣೆ ಹಾಕಿರಬಹುದು ಎನ್ನುತ್ತಾರೆ ಪಕ್ಷದ ಹಿರಿಯರು.

1992ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಕೋಟ, 1996ರಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಗೆದ್ದರು. 2005ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು.

2009ರಿಂದ ನಾಲ್ಕು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಸಚಿವರಾಗಿಯೂ ಸೇವೆ ಸಲ್ಲಿಸಿದ್ದು, ಸದ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಛಾಯಾಗ್ರಾಹಕರಾಗಿದ್ದ ಕೋಟ ಸ್ವಂತ ಸ್ಟುಡಿಯೋವನ್ನೂ ಹೊಂದಿದ್ದರು. ಆರಂಭದಲ್ಲಿ ಪತ್ರಿಕೆಗಳಿಗೆ ಛಾಯಾಚಿತ್ರ ಕಳಿಸುತ್ತಿ ದ್ದ ರು. ಬಳಿಕ ಪತ್ರಿಕೆಗಳಿಗೆ ಅಂಕಣ ಬರೆಯುವ ಮೂಲಕ ಗುರುತಿಸಿಕೊಂಡಿದ್ದರು. 7ನೇ ತರಗತಿ ಓದಿದ್ದಾರೆ.