ಆ.2: ಉಡುಪಿಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ

ಉಡುಪಿ: ಚಿತ್ರದುರ್ಗ ಸಾಣೆಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ
ಸಹಮತ ವೇದಿಕೆ ಮತ್ತು ಉಡುಪಿ ಬಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಆ.2ರಂದು ನಡೆಯಲಿದೆ ಎಂದು ಮತ್ತೆ ಕಲ್ಯಾಣ ಉಡುಪಿ ಸಂಯೋಜನ ಸಮಿತಿ ಅಧ್ಯಕ್ಷ ಯು.ಸಿ. ನಿರಂಜನ್‌ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂತಾವರ ಅಲ್ಲಮಪ್ರಭು ಪೀಠದ ನಿರ್ದೇಶಕ ಡಾ. ನಾ. ಮೊಗಸಾಲೆ,‌ ಬಾಲಕಿಯರ ಪಿಯು ಕಾಲೇಜು ಪ್ರಾಧ್ಯಾಪಕ ಜೆ.ಎಂ. ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಪಾದರ
ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ಆಯ್ದ
ಕಾಲೇಜಿನ ೫೦೦ ವಿದ್ಯಾರ್ಥಿಗಳೊಂದಿಗೆ ವಚನ ಸಾಹಿತ್ಯದ ಕುರಿತು ಸಂವಾದ
ಏರ್ಪಡಿಸಲಾಗಿದೆ ಎಂದರು.
ಅಂದು ಮಧ್ಯಾಹ್ನ ೩.೩೦ಕ್ಕೆ ವಿವಿಧ ಧಾರ್ಮಿಕ ನೇತಾರರು, ಜನಪ್ರತಿನಿಧಿಗಳು ಹಾಗೂ
ಸಾರ್ವಜನಿಕರು ಒಟ್ಟು ಸೇರಿ ಉಡುಪಿ ಬೋರ್ಡ್‌ ಹೈಸ್ಕೂಲ್‌ನಿಂದ ಪುರಭವನದವರೆಗೆ‌ ಸಾಮರಸ್ಯ ನಡಿಗೆ ನಡೆಸಲಿದ್ದಾರೆ. ಸಂಜೆ ೫ ಗಂಟೆಗೆ ನಡೆಯುವ ಸಾರ್ವಜನಿಕ ಸಮಾವೇಶವನ್ನು‌ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಪಾದರು ಉದ್ಘಾಟಿಸುವರು ಎಂದು ತಿಳಿಸಿದರು.
ಬಸವಣ್ಣ ಮತ್ತು ಜನತಂತ್ರ ಕುರಿತು ಚಿಂತಕ, ಕಡೂರು ಮಾಜಿ ಶಾಸಕ ವೈ.ಎಸ್‌.ವಿ. ದತ್ತ,
ವಚನಗಳ ಸಮಾನತೆಯ ಆಶಯದ ಬಗ್ಗೆ ಚಿಂತಕಿ ಕೆ. ನೀಲಾ ಉಪನ್ಯಾಸ ನೀಡಲಿದ್ದಾರೆ. ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌ ಭಾಗವಹಿಸುವರು. ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಅಧ್ಯಕ್ಷತೆ ವಹಿಸುವರು.
ರಾತ್ರಿ ೭ ಗಂಟೆಗೆ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನವಾಗಲಿದೆ ಎಂದರು.
ಗೋಷ್ಠಿಯಲ್ಲಿ ಉಡುಪಿ ಬಸವ ಸಮಿತಿಯ ಗೌರವಾಧ್ಯಕ್ಷ ಡಾ. ಜಿ.ಎಸ್‌. ಚಂದ್ರಶೇಖರ್‌, ಹಿರಿಯ ಚಿಂತಕ ಜಿ. ರಾಜಶೇಖರ್‌, ದಸಂಸ ಹಿರಿಯ ಮುಖಂಡ ಸುಂದರ್‌ ಮಾಸ್ತರ್‌, ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯಾಯ, ಧರ್ಮಗುರು ವಿಲಿಯಂ ಮಾರ್ಟಿಸ್‌, ಉಡುಪಿ ಬಸವ ಸಮಿತಿ ಅಧ್ಯಕ್ಷ ಜಿ.ಎಂ. ಪಾಟೀಲ, ಉಪಾಧ್ಯಕ್ಷ ಪ್ರೊ. ಸಿದ್ದ ರಾಮಣ್ಣ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಬ್ದುಲ್‌ ಅಝೀಝ್‌ ಉದ್ಯಾವರ, ದಲಿತ ಮುಖಂಡ ಶ್ಯಾಂರಾಜ್‌ ಬಿರ್ತಿ ಉಪಸ್ಥಿತರಿದ್ದರು.