ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರ ಗಮನಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಲಹೆ ಸೂಚನೆಗಳನ್ನು ಹೊರಡಿಸಿದೆ. ಅವು ಇಂತಿವೆ
- ಶ್ರೀರಾಮ ಜನ್ಮಭೂಮಿ ಮಂದಿರವು ಪ್ರತಿದಿನ ಸರಾಸರಿ 1 ರಿಂದ 1.5 ಲಕ್ಷ ಯಾತ್ರಾರ್ಥಿಗಳನ್ನು ಬರಮಾಡಿಕೊಳ್ಳುತ್ತಿದೆ.
- ಭಕ್ತರು ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ರಾಮಲಲ್ಲಾನ ದರ್ಶನಕ್ಕಾಗಿ ಬೆಳಗ್ಗೆ 6:30 ರಿಂದ ರಾತ್ರಿ 9:30 ರವರೆಗೆ ಭೇಟಿ ನೀಡಬಹುದು.
- ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಪ್ರವೇಶದಿಂದ ಹಿಡಿದು ದರ್ಶನದ ಬಳಿಕ ನಿರ್ಗಮಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯು ಅತ್ಯಂತ ಸರಳ ಮತ್ತು ಅನುಕೂಲಕರವಾಗಿದೆ. ವಿಶಿಷ್ಟವಾಗಿ, ಭಕ್ತರು ಪ್ರಭು ಶ್ರೀ ರಾಮಲಲ್ಲಾ ಸರ್ಕಾರ್ ಅವರ ಸುಗಮ ದರ್ಶನವನ್ನು 60 ರಿಂದ 75 ನಿಮಿಷಗಳ ಒಳಗೆ ಪಡೆಯಬಹುದು.
- ಭಕ್ತರು ತಮ್ಮ ಅನುಕೂಲಕ್ಕಾಗಿ ಮತ್ತು ಸಮಯ ಉಳಿತಾಯಕ್ಕಾಗಿ ತಮ್ಮ ಮೊಬೈಲ್ ಫೋನ್, ಪಾದರಕ್ಷೆಗಳು, ಪರ್ಸ್ ಇತ್ಯಾದಿಗಳನ್ನು ಮಂದಿರದ ಆವರಣದ ಹೊರಗೆ ಬಿಡಲು ಸೂಚಿಸಲಾಗಿದೆ.
- ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಹೂವು, ಹಾರ, ಪ್ರಸಾದ ಇತ್ಯಾದಿಗಳನ್ನು ತರಬಾರದಾಗಿ ಟ್ರಸ್ಟ್ ಕೇಳಿಕೊಂಡಿದೆ.
- ಬೆಳಿಗ್ಗೆ 4 ಗಂಟೆಗೆ ಮಂಗಳಾರತಿ, 6:15 ಕ್ಕೆ ಶೃಂಗಾರ ಆರತಿ ಮತ್ತು ರಾತ್ರಿ 10 ಗಂಟೆಗೆ ಶಯನ ಆರತಿಗಳಿಗೆ ಪ್ರವೇಶ ಪಾಸ್ ಇದ್ದರೆ ಮಾತ್ರ ಪ್ರವೇಶ. ಇತರ ಆರತಿಗಳಿಗೆ ಯಾವುದೇ ಪ್ರವೇಶ ಪಾಸ್ಗಳ ಅಗತ್ಯವಿಲ್ಲ.
- ಪ್ರವೇಶ ಪಾಸ್ಗಾಗಿ ಭಕ್ತರ ಹೆಸರು, ವಯಸ್ಸು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ನಗರ ಮುಂತಾದ ಮಾಹಿತಿ ಅಗತ್ಯವಿದೆ.
- ಈ ಪ್ರವೇಶ ಪಾಸ್ ಅನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವೆಬ್ಸೈಟ್ನಿಂದಲೂ ಪಡೆಯಬಹುದು. ಪ್ರವೇಶ ಪಾಸ್ ಉಚಿತವಾಗಿದೆ.
- ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಿರ್ದಿಷ್ಟ ಶುಲ್ಕ ಪಾವತಿಸಿ ಅಥವಾ ಯಾವುದೇ ವಿಶೇಷ ಪಾಸ್ ಮೂಲಕ ವಿಶೇಷ ದರ್ಶನಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ದರ್ಶನಕ್ಕಾಗಿ ಹಣ ಪಾವತಿಸುವ ಬಗ್ಗೆ ಯಾರಾದರೂ ಬೇಡಿಕೆ ಇಟ್ಟಲ್ಲಿ, ಅದು ಹಗರಣದ ಪ್ರಯತ್ನವಾಗಿರಬಹುದು. ಮಂದಿರದ ಆಡಳಿತ ಮಂಡಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
- ವಯೋವೃದ್ಧರು ಮತ್ತು ಅಂಗವಿಕಲರಿಗಾಗಿ ಮಂದಿರದಲ್ಲಿ ಗಾಲಿಕುರ್ಚಿಗಳು ಲಭ್ಯವಿವೆ. ಈ ಗಾಲಿಕುರ್ಚಿಗಳನ್ನು ಶ್ರೀರಾಮ ಜನ್ಮಭೂಮಿ ಮಂದಿರದ ಆವರಣದಲ್ಲಿ ಬಳಸಲು ಮಾತ್ರ ಉದ್ದೇಶಿಸಲಾಗಿದೆ ಹೊರತು ಅಯೋಧ್ಯೆ ನಗರ ಅಥವಾ ಇನ್ನಿತರ ಯಾವುದೇ ಮಂದಿರ ಭೇಟಿಗೆ ಅಲ್ಲ. ಗಾಲಿಕುರ್ಚಿಗೆ ಯಾವುದೇ ಬಾಡಿಗೆ ಶುಲ್ಕವಿಲ್ಲ, ಆದರೆ ಗಾಲಿಕುರ್ಚಿಗೆ ಸಹಾಯ ಮಾಡುವ ಯುವ ಸ್ವಯಂಸೇವಕರಿಗೆ ನಾಮಮಾತ್ರ ಶುಲ್ಕವನ್ನು ನೀಡಬೇಕಾಗುವುದು ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.